ಮಮತಾ ಬ್ಯಾನರ್ಜಿ ‘ಯುನೈಟ್ ಇಂಡಿಯಾ’ ರ‍್ಯಾಲಿ- ಕೇಂದ್ರದ ವಿರುದ್ಧ ಸಿಎಂ ಎಚ್‍ಡಿಕೆ ವಾಗ್ದಾಳಿ

Public TV
2 Min Read
HDK KOLKATA

ಕೋಲ್ಕತ್ತಾ: ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರನ್ನು ಖರೀದಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಅವರು ಏರ್ಪಡಿಸಿರುವ ‘ಯುನೈಟ್ ಇಂಡಿಯಾ’ ಬೃಹತ್ ರ‍್ಯಾಲಿಯಲ್ಲಿ ಇಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಭಾಗವಹಿಸಿ ಮಾತನಾಡಿದರು. ಜನರ ವಿಶ್ವಾಸವನ್ನು ಗಳಿಸಲು ಹಾಗೂ ರಾಜ್ಯದ ಹಿತ ಕಾಯಲು ಪ್ರದೇಶಿಕ ಪಕ್ಷಗಳು ಸಮರ್ಥವಾಗಿದೆ ಎಂದು ತಿಳಿಸಿದರು.

CM HDK KOLKATA

ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಎಚ್‍ಡಿಕೆ, ಕಳೆದ ಕೆಲ ಸಮಯದಿಂದ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಲ್ಲಿ ಬಿಜೆಪಿ ಪಕ್ಷ ಬಹುಮತ ಪಡೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರನ್ನು ಖರೀದಿ ಮಾಡಲು ಪ್ರಯತ್ನಿಸುತ್ತಿದೆ. ಅಲ್ಲದೇ ಕರ್ನಾಟಕ ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಲು ಪ್ರಯತ್ನಿಸುತ್ತಿದ್ದರೆ, ಕೇಂದ್ರ ಸರ್ಕಾರ ರೈತರಿಗೆ ನೋಟಿಸ್ ಜಾರಿ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ರಾಷ್ಟ್ರದಲ್ಲಿ ಅಸಂವಿಧಾನಿಕ ಆಡಳಿತ ವ್ಯವಸ್ಥೆಯನ್ನು ಇಂದು ನಾವು ನೋಡುತ್ತಿದ್ದೇವೆ ಎಂದು ಕೇಂದ್ರದ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್, ಎನ್ ಚಂದ್ರಬಾಬು ನಾಯ್ಡು, ಮಾಜಿ ಸಿಎಂ ಗಳಾದ ಫಾರೂಖ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಎಂಡಿಕೆ ಪಕ್ಷದ ಎಂಕೆ ಸ್ಟಾಲಿನ್, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ, ಬಿಎಸ್‍ಪಿ ನಾಯಕ ಸತೀಶ್ ಮಿಶ್ರಾ, ಶರದ್ ಪವರ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಮಮತಾ ಬ್ಯಾನರ್ಜಿ ಮಾತನಾಡಿ, ಎಲ್ಲಾ ಪಕ್ಷಗಳು ಒಂದಾಗಿ ಬಿಜೆಪಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸಬೇಕು. ಕೇಂದ್ರದಲ್ಲಿ ಬಿಜೆಪಿ ಆಡಳಿತನ್ನು ಕಿತ್ತೊಗೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ನಾಯಕರು ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಾಗ್ದಾಳಿ ನಡೆಸಿದರು. ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭಾಗವಹಿಸಿರಲಿಲ್ಲ. ಆದರೆ ರಾಹುಲ್ ನಿನ್ನೆಯೇ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು.

ಮುಂದಿನ ಏಪ್ರಿಲ್ ಮೇ ತಿಂಗಳಿನಲ್ಲಿ ನಡೆಯಬಹುದಾದ ಲೋಕಸಭಾ ಚುನಾವಣೆಗೆ ಎನ್‍ಡಿಎ ವಿರುದ್ಧ ಒಕ್ಕೂಟವನ್ನು ನಿರ್ಮಿಸಲು ಮಮತಾ ಬ್ಯಾನರ್ಜಿ ಅವರು ಸಮಾವೇಶವನ್ನು ಏರ್ಪಡಿಸಿದ್ದಾರೆ. ಈ ಮೂಲಕ ಒಗ್ಗಟ್ಟು ಪ್ರದರ್ಶಿಸಿ ಬಿಜೆಪಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *