ಬರ ಪರಿಶೀಲನೆಗಾಗಿ ರೆಸಾರ್ಟಿನಿಂದ ವಾಪಸ್ ಆಗುತ್ತಿದ್ದಾರೆ ಬಿಜೆಪಿ ಶಾಸಕರು

Public TV
3 Min Read
RESORT 1

– 5 ದಿನ ರೆಸಾರ್ಟ್ ವಾಸ್ತವ್ಯಕ್ಕೆ ಕೋಟಿ, ಕೋಟಿ ಹಣ ಖರ್ಚು

ನವದೆಹಲಿ: ಕೋಟಿ, ಕೋಟಿ ಹಣ ಖರ್ಚು ಮಾಡಿ ಐದು ದಿನಗಳ ಕಾಲ ಐಷಾರಾಮಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ಶಾಸಕರು ರಾಜ್ಯಕ್ಕೆ ಮರಳುತ್ತಿದ್ದಾರೆ. ಈ ಮೂಲಕ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ಬರ ಅಧ್ಯಯನ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಗುರುಗ್ರಾಮದಿಂದ 2 ಕಿಮೀ ದೂರದ ಸರಾಯ್‍ನಲ್ಲಿರುವ ಲೆಮನ್ ಟ್ರೀ ರೆಸಾರ್ಟ್ ನಿಂದ ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿಭಟ್, ಬಸವರಾಜ್ ದಢೇಸಗೂರು, ಹರೀಶ್ ಪುಂಜಾ, ಹರ್ಷವರ್ಧನ, ತಿಪ್ಪಾರೆಡ್ಡಿ ಹೊರಟಿದ್ದಾರೆ. ಮಾಧ್ಯಮದವರು ಮಾತನಾಡಿಸಲು ಯತ್ನಿಸಿದರೂ ಕಾರಿನಲ್ಲಿ ಕುಳಿತು ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಅಲ್ಲಿಂದ ಇಂದು ರಾಜ್ಯಕ್ಕೆ ಮರಳಲಿದ್ದಾರೆ.

5 1

ಇತ್ತ ಐಟಿಸಿ ಗ್ರ್ಯಾಂಡ್ ಭಾರತ್‍ನಿಂದ ಪ್ರತ್ಯೇಕ ಕಾರುಗಳಲ್ಲಿ ಶಾಸಕರ ಗುಂಪು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದೆ. ಸೋಮಶೇಖರ್ ರೆಡ್ಡಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಬೆಳ್ಳಿ ಪ್ರಕಾಶ್, ರಾಮದಾಸ್, ಬಸವರಾಜ್ ಮತ್ತಿಮೂಡ್, ರಾಮಣ್ಣ ಲಮಾಣಿ, ದಿನಕರ್ ಶೆಟ್ಟಿ, ಕುಮಾರಸ್ವಾಮಿ, ಆರ್.ಅಶೋಕ್, ನಿರಂಜನ್, ಸಿ.ಸಿ.ಪಾಟೀಲ್, ದೊಡ್ಡನಗೌಡ, ಸಿದ್ದು ಸವದಿ ಇದ್ದರು. ಎಲ್ಲ ಶಾಸಕರು ಕಾರಿನ ಗ್ಲಾಸ್ ಏರಿಸಿಕೊಂಡು ಮಾಧ್ಯಮಗಳ ಜತೆ ಮಾತನಾಡದೇ ರೆಸಾರ್ಟಿನಿಂದ ಕಾಲ್ಕಿತ್ತಿದ್ದಾರೆ.

ರಾಜ್ಯಕ್ಕೆ ಮರಳುತ್ತಿದ್ದ ರಾಜೂಗೌಡ, ಶಿವನಗೌಡನಾಯಕ್ ಹಾಗೂ ಶಿವರಾಜ್ ಪಾಟೀಲ್ ಮಾತನಾಡಿ, ಆಪರೇಷನ್ ಕಮಲದ ಕುರಿತು ಯಾವುದೇ ಮಾತುಕತೆಯಾಗಿಲ್ಲ. ನಾವು ಲೋಕಸಭಾ ಚುನಾವಣೆ ಸಿದ್ಧತೆಯ ಅಭ್ಯಾಸ ವರ್ಗಗಳು ಇದ್ದಿದ್ದರಿಂದ ಇಲ್ಲಿ ಉಳಿದುಕೊಂಡಿದ್ದೆವು ಎಂದು ಹೇಳಿದ್ದಾರೆ.

RESORT copy

ರೆಸಾರ್ಟ್ ಖರ್ಚು ಎಷ್ಟು?:
104 ಶಾಸಕರ ಪೈಕಿ ಐವರು ಮಾತ್ರ ರೆಸಾರ್ಟಿಗೆ ಹೋಗಿರಲಿಲ್ಲ. ಶಾಸಕ ಗೋವಿಂದ ಕಾರಜೋಳ, ಎಸ್.ಎ. ರವೀಂದ್ರನಾಥ್, ಕರುಣಾಕರೆಡ್ಡಿ, ಸಿ.ಎಂ. ಉದಾಸಿ ಮತ್ತು ಸಿ.ಟಿ. ರವಿ ರೆಸಾರ್ಟಿಗೆ ಹೋಗಿರಲಿಲ್ಲ. ಉಳಿದ 99 ಶಾಸಕರು ರೆಸಾರ್ಟಿನಲ್ಲಿ ತಂಗಿದ್ದರು.

ಗುರುಗ್ರಾಮದ ಐಟಿಸಿ ಗ್ರಾಂಡ್ ಭಾರತ್, ಲೆಮೆನ್ ಟ್ರೀ ಮತ್ತು ಮುಂಬೈ ರೆಸಾರ್ಟಿನಲ್ಲಿ ಬಿಜೆಪಿ ಶಾಸಕರು ತಂಗಿದ್ದರು. ಮೊದಲ 5 ದಿನ ಐಶಾರಾಮಿ ಐಟಿಸಿ ಗ್ರಾಂಡ್ ಭಾರತ್ ರೆಸಾರ್ಟಿನಲ್ಲಿ ಬಿಜೆಪಿಯ 97 ಶಾಸಕರು ಇದ್ದರು. ಐಟಿಸಿ ಗ್ರಾಂಡ್ ಭಾರತ್ `7′ ಸೌಲಭ್ಯದ ರೆಸಾರ್ಟ್ ಆಗಿದ್ದು, ಇಲ್ಲಿ ಒಂದು ದಿನಕ್ಕೆ ಒಂದು ರೂಮಿಗೆ ಕನಿಷ್ಟ 25 ಸಾವಿರ ರೂ. ಇದೆ. ಇಲ್ಲಿನ ವಿಲ್ಲಾಗಳ ಒಂದು ದಿನದ ಬಾಡಿಗೆ ಬರೊಬ್ಬರಿ 3 ಲಕ್ಷ ರೂಪಾಯಿ ಆಗಿದ್ದರೆ, ಬಿಜೆಪಿ ಶಾಸಕರು ಉಳಿದುಕೊಂಡಿದ್ದ ರೂಮ್ ಗಳ ಒಂದು ದಿನದ ಬಾಡಿಗೆ 75 ಸಾವಿರ ರೂ. ಇದೆ.

BJP Leaders b copy

ಬಿಜೆಪಿ ತನ್ನ ಶಾಸಕರಿಗಾಗಿ ಒಟ್ಟು 60 ರೂಮ್ ಗಳನ್ನು ಬುಕ್ ಮಾಡಿತ್ತು. ಒಟ್ಟು ಗುರುಗ್ರಾಮದ ಐಶಾರಾಮಿ ರೂಮ್ ಬಾಡಿಗೆಯೇ 2 ಕೋಟಿ 27 ಲಕ್ಷ ರೂಪಾಯಿ ಆಗಿದೆ. ಇನ್ನೂ ರೂಮ್ ಬಾಡಿಗೆ ಜಿಮ್, ಹೇರ್ ಸೆಲೂನ್, ಬಾಡಿ ಮಸಾಜ್, ಬ್ರೇಕ್ ಫಾಸ್ಟ್, ಸ್ನ್ಯಾಕ್ಸ್ ಸೇರಿದ ಎಲ್ಲ ಪ್ಯಾಕೇಜ್ ಕೂಡ ಇತ್ತು. ಮಧ್ಯಾಹ್ನ, ರಾತ್ರಿ ಊಟ ಹಾಗೂ ಮದ್ಯದ ವೆಚ್ಚ ಬೇರೆ ಇತ್ತು.

ಲೆಮನ್ ಟ್ರೀ ರೆಸಾರ್ಟ್ ನಲ್ಲಿ 23 ಶಾಸಕರು ಇದ್ದರು. ಅದರ ಖರ್ಚು ಒಟ್ಟು 10 ಲಕ್ಷ ರೂಪಾಯಿ ಆಗಿದ್ದು, ರೂಮ್ ಬಾಡಿಗೆ ಬ್ರೇಕ್ ಫಾಸ್ಟ್, ಸ್ನ್ಯಾಕ್ಸ್ ಸೇರಿದ ಪ್ಯಾಕೇಜ್ ಆಗಿತ್ತು. ಒಟ್ಟಾರೆ ಆಪರೇಷನ್ ಕಮಲ ಮಾಡಲು ಬಿಜೆಪಿ ನಾಯಕರು 3.16 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ. ಲೆಮನ್ ಟ್ರೀ ರೆಸಾರ್ಟ್ ನಲ್ಲಿದ್ದ 23 ಶಾಸಕರಿಗೆ 10 ಲಕ್ಷ ರೂ.ವನ್ನು ಬಿಜೆಪಿ ನಾಯಕರು ಖರ್ಚು ಮಾಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ಹಣವನ್ನು ಯಾರು ಕೊಟ್ಟಿದ್ದಾರೆ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *