ಚಿಕ್ಕಬಳ್ಳಾಪುರ: ಚಾಮರಾಜನಗರ ಜಿಲ್ಲೆಯ ವಿಷ ದುರಂತ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಕಾಫಿ ಕುಡಿದು ಅಸ್ವಸ್ಥಗೊಂಡಿದ್ದ ತಾಯಿ ಮಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಬತ್ತಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಕ್ಕಲಮ್ಮ(80) ಮತ್ತು ನರಸಮ್ಮ(60) ಮೃತ ತಾಯಿ ಮಗಳು. ಇನ್ನೂ ಕಾಫಿ ಕುಡಿದಿದ್ದ ಮೃತ ನರಸಮ್ಮನ ಮೊಮ್ಮಕ್ಕಳಾದ ಅರ್ಜುನ್ (7) ಮತ್ತು ಆರತಿ(4) ಅಪಾಯದಿಂದ ಪಾರಾಗಿದ್ದಾರೆ. ಚಿಂತಾಮಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಾಯಿ ಮಗಳು ಮೃತಪಟ್ಟಿದ್ದಾರೆ.
ಮೃತ ಕುಟುಂಬದವರು ಸ್ವಗ್ರಾಮದ ಅಂಗಡಿಯೊಂದರಲ್ಲಿ ಕಾಫಿಪುಡಿ ಖರೀದಿಸಿದ್ದರು. ಬಳಿಕ ಶನಿವಾರ ಬೆಳಗ್ಗೆ ಎಲ್ಲರೂ ಕಾಫಿ ಮಾಡಿಕೊಂಡು ಕುಡಿದಿದ್ದಾರೆ. ಸ್ವಲ್ಪ ಸಮಯದ ಬಳಿಕ ಎಲ್ಲರಿಗೂ ವಾಂತಿಯಾಗಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಚಿಂತಾಮಣಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವಾಂತಿ ಹೆಚ್ಚಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಕೋಲಾರಕ್ಕೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ಆದರೆ ಅಷ್ಟರಲ್ಲಿ ಚಿಂತಾಮಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅಕ್ಕಲಮ್ಮ ಮತ್ತು ನರಸಮ್ಮ ಮೃತಪಟ್ಟಿದ್ದಾರೆ.
ಕಾಫಿ ಕುಡಿದಿದ್ದ ಅರ್ಜುನ್ ಮತ್ತು ಆರತಿ ಅಪಾಯದಿಂದ ಪಾರಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಕಾಫಿಯಲ್ಲಿ ವಿಷ ಬೆರತಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಬತ್ತಲಹಳ್ಳಿ ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಈ ಕುರಿತು ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಗೇಪಲ್ಲಿ ಪೊಲೀಸರು ಚುರುಕಿನಲ್ಲಿ ತನಿಖೆ ಆರಂಭಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv