ಕುಡಿಯುವ ನೀರಿನಲ್ಲಿ ವಿಷ ಮಿಶ್ರಣ- ಇಬ್ಬರು ಆರೋಪಿಗಳ ಬಂಧನ

Public TV
2 Min Read
ygr water arrest copy

-ನೀರಿಗೆ ವಿಷ ಬೆರೆಸಿ ಊರು ತುಂಬಾ ಡಂಗೂರ ಸಾರಿಸಿದ್ದ ಪಂಪ್ ಆಪರೇಟರ್ ಬಂಧನ!
-ವಿಷ ಬೆರೆಸಿದ್ಯಾಕೆ ಗೊತ್ತಾ?

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರ ಕೆ. ಗ್ರಾಮದ ಬಾವಿಯ ನೀರಿಗೆ ವಿಷ ಮಿಶ್ರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಶಖಾಪುರ ಪಂಪ್ ಆಪರೇಟರ್ ಮೌನೇಶ್ ಹಾಗೂ ಅರಕೇರಾ ಜೆ ಗ್ರಾಮದ ಮಾಜಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಶಾಂತಗೌಡ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅರಕೇರಾ ಜೆ ಗ್ರಾಮ ಪಂಚಾಯ್ತಿಯ ಪಿಡಿಓ ವರ್ಗಾವಣೆ ಮಾಡಿಸುವ ಉದ್ದೇಶದಿಂದ ಆರೋಪಿಗಳು ನೀರಿನಲ್ಲಿ ಕ್ರಿಮಿನಾಶಕ ಬೆರೆಸಿದ್ದರು ಎಂದು ತಪ್ಪು ಒಪ್ಪಿಕೊಂಡಿದ್ದಾರೆ.

YGR ASWATH AV 4 copy

ವಿಷ ಮಿಶ್ರಿತ ನೀರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಪಿ ಯಡಾ ಮಾರ್ಟಿನ್ ಅವರು ಸುರಪುರ ಡಿವೈಎಸ್ಪಿ ಶಿವನಗೌಡ ಪಾಟೀಲ ಅವರ ನೇತೃತ್ವದ 5 ಅಧಿಕಾರಿಗಳ ತನಿಖಾ ತಂಡ ರಚನೆ ಮಾಡಿದ್ದರು. ಎಸ್‍ಪಿ ಯಡಾ ಮಾರ್ಟಿನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಯಾದಗಿರಿಗೆ ಕರೆ ತಂದ ಸುರಪುರ ಡಿವೈಎಸ್ಪಿ ಶಿವನಗೌಡ ಪಾಟೀಲ ಅವರ ನೇತೃತ್ವದ ತನಿಖಾ ತಂಡ ರಚಿಸಲಾಗಿತ್ತು. ಇದೇ ತಿಂಗಳ 9ರಂದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರ ಕೆ ಗ್ರಾಮದ ಬಾವಿಗೆ ಹಾಗೂ ನೀರು ಪೂರೈಸುವ ಪೈಪ್ ನಲ್ಲಿ ವಿಷ ಬೆರೆಸಿದ್ದರು. ಇಲ್ಲಿಂದ ತೆಗ್ಗಹಳ್ಳಿ ಹಾಗೂ ಶಖಾಪುರ ಗ್ರಾಮಕ್ಕೆ ನೀರು ಪೂರೈಸಲಾಗಿತ್ತು. ವಿಷ ಮಿಶ್ರಿತ ನೀರು ಸೇವಿಸಿ ತೆಗ್ಗಹಳ್ಳಿ ಗ್ರಾಮದ ಹೊನ್ನಮ್ಮ ಎಂಬವರು ಮೃತಪಟ್ಟಿದ್ದರು” ಎಂದರು.

ygr water collage copy

ಬಂಧನಕ್ಕೊಳಗಾದ ಪಂಪ್ ಆಪರೇಟರ್ ಮೌನೇಶ್, ಹಾಗೂ ಆತನ ತಾಯಿ ನಾಗಮ್ಮ ಸೇರಿದಂತೆ 17 ಜನ ವಿಷ ಮಿಶ್ರಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗಿ ನಂತರ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಪಂಪ್ ಆಪರೇಟರ್ ಮೌನೇಶ್ ದುಷ್ಕರ್ಮಿಗಳು ವಿಷ ಬೆರೆಸಿದ್ದರು ಎಂದು ಕೆಂಬಾವಿ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈಗ ದೂರು ನೀಡಿದ್ದ ಮೌನೇಶ್ ಬಂಧನಕ್ಕೊಳಗಾಗಿದ್ದಾನೆ. ವಿಷ ಮಿಶ್ರಿತ ನೀರಿನ ಮಾಹಿತಿ ಅರಿತು ಪಂಪ್ ಆಪರೇಟರ್ ಮೌನೇಶ್ ನೀರು ಪೂರೈಸುವದನ್ನು ಸ್ಥಗಿತಗೊಳಿಸಿದ್ದನು ಹಾಗೂ ನೀರು ಕುಡಿಯದಂತೆ ಎಚ್ಚರಿಕೆ ನೀಡಿ ಸಾಕಷ್ಟು ಜನರ ಪ್ರಾಣ ಉಳಿಸಿದ್ದೆನೆಂದು ಮೌನೇಶ್ ಹೇಳಿಕೊಂಡಿದ್ದ. ಆದರೆ ಈಗ ಮೌನೇಶ ಬಂಧನಕ್ಕೊಳಗಾಗಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *