ಜೆಡಿಎಸ್ ಪಕ್ಷವನ್ನು 3ನೇ ದರ್ಜೆಯ ಪ್ರಜೆಯನ್ನಾಗಿ ಕಾಂಗ್ರೆಸ್ ಪರಿಗಣಿಸಬಾರದು: ಸಿಎಂ

Public TV
2 Min Read
dks hdk congress jds 1

ಬೆಂಗಳೂರು: ಜೆಡಿಎಸ್ ಪಕ್ಷವನ್ನು ಮೂರನೇ ದರ್ಜೆಯ ಪ್ರಜೆಯನ್ನಾಗಿ ಕಾಂಗ್ರೆಸ್ ಪರಿಗಣಿಸಬಾರದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಸಂಸ್ಥೆಗೆ ಸಂದರ್ಶನ ನೀಡುವ ವೇಳೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿನ ಸೀಟು ಹಂಚಿಕೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಬಿಜೆಪಿ ಸೋಲಿಸಲು ನಾವು ಒಂದಾಗಿದ್ದೇವೆ. ಹೀಗಾಗಿ ನಾವಿಬ್ಬರು ಕೊಡು ಮತ್ತು ಕೊಳ್ಳುವಿಕೆಯ ನೀತಿಯನ್ನು ಅಳವಡಿಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ನಮ್ಮನ್ನು ಮೂರನೇ ದರ್ಜೆಯ ಪ್ರಜೆಯನ್ನಾಗಿ ಪರಿಗಣಿಸಬಾರದು ಎಂದು ಉತ್ತರಿಸಿದರು.

JDS CONGRESS

ಲೋಕಸಭೆ ಸೀಟ್ ಹಂಚಿಕೆ ವಿಚಾರದಲ್ಲಿ ವಿಫಲವಾದರೆ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆಯೇ ಎನ್ನುವ ಪ್ರಶ್ನೆಗೆ, ನನ್ನ ಪ್ರಕಾರ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಿಗೆ ಲೋಕಸಭಾ ಚುನಾವಣೆಯನ್ನು ಎದುರಿಸಬೇಕು. ಯಾಕೆಂದರೆ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಸ್ಥಾಪನೆಯಾಗಿದೆ. ಬಿಜೆಪಿ ಅಧಿಕಾರವನ್ನು ಹಿಡಿಯಬಾರದು ಎನ್ನುವ ಕಾರಣಕ್ಕೆ ನಾವಿಬ್ಬರು ಒಂದಾಗಿದ್ದು, ಲೋಕಸಭಾ ಚುನಾವಣೆಯಲ್ಲೂ ನಾವಿಬ್ಬರು ಒಟ್ಟಾಗಿ ಹೋಗುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

hdk dks congress jds 1

ದಕ್ಷಿಣ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ದೇಶದ ರಾಜಕೀಯದಲ್ಲಿ ಹಲವು ಬದಲಾವಣೆಯಾಗಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿಗೆ ಹೊಡೆತ ನೀಡಿದ್ದು, ಹಲವು ಉಪ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದೆ ಎಂದರು.

ಆತಿಯಾದ ಆತ್ಮವಿಶ್ವಾಸವೇ ಕಾಂಗ್ರೆಸ್ಸಿಗೆ ಹಿನ್ನಡೆಯಾಗಿದೆ. ಈ ವಿಚಾರಗಳು ಅವರಿಗೆ ಚೆನ್ನಾಗಿ ತಿಳಿದಿರುವ ಕಾರಣ ಅವರು ಹಿಂದಿನ ಘಟನೆಗಳನ್ನು ಮರೆಯಲಾರರು ಎನ್ನುವ ವಿಶ್ವಾಸ ನನಗಿದೆ ಎಂದು ಎಚ್‍ಡಿಕೆ ತಿಳಿಸಿದರು.

JDS COngress 3

ಈ ವೇಳೆ ಜೆಡಿಎಸ್ 12 ಲೋಕಸಭಾ ಸ್ಥಾನಕ್ಕೆ ಬೇಡಿಕೆ ಇಟ್ಟಿರುವ ವಿಚಾರವನ್ನು ಕೇಳಿದ್ದಕ್ಕೆ ಸಿಎಂ ನೇರವಾಗಿ ಯಾವುದೇ ಉತ್ತರ ನೀಡಲಿಲ್ಲ.

ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಎಚ್‍ಡಿ ದೇವೇಗೌಡ ಅವರು ಸರ್ಕಾರ ರಚನೆಯಾದ ಬಳಿಕ ಕಾಂಗ್ರೆಸ್ಸಿಗೆ 2/3 ಮತ್ತು ಜಡಿಎಸ್ 1/3 ಅಧಿಕಾರ ಹಂಚಿಕೆ ನೀತಿಯನ್ನು ಅನುಸರಿಸುತ್ತಾ ಬಂದಿದ್ದಾರೆ. ಈ ಹಂಚಿಕೆ ನೀತಿ ಸಚಿವ ಸ್ಥಾನ ಮತ್ತು ನಿಗಮ, ಮಂಡಳಿ ನೇಮಕದಲ್ಲಿ ಅನ್ವಯಿಸಿಕೊಂಡಿದ್ದೇವೆ. ಈ ನೀತಿಯನ್ನು ಅವರೂ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

JDS COngress 2

ಆಪರೇಷನ್ ಕಮಲದ ಬಗ್ಗೆ ಪ್ರಸ್ತಾಪಿಸಿದ ಸಿಎಂ, ಬಿಜೆಪಿಯವರು ನಮ್ಮ ಶಾಸಕರನ್ನು ಸಂಪರ್ಕಿಸಿದ್ದು ನಿಜ. ಸರ್ಕಾರಕ್ಕೆ ಬಿಜೆಪಿಯವರು ತೊಂದರೆ ನೀಡುತ್ತಿರುವುದು ಸರಿಯಲ್ಲ. ನಮ್ಮ ಸರ್ಕಾರ ಸುಭದ್ರವಾಗಿದ್ದು 5 ವರ್ಷ ಪೂರ್ಣಗೊಳಿಸುತ್ತದೆ. ಲೋಕಸಭಾ ಚುನಾವಣೆಯವರೆಗೆ ನಾವು ಮೈತ್ರಿ ಮಾಡಿಕೊಂಡಿಲ್ಲ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಮಾಯಾವತಿ ಮತ್ತುಅಖಿಲೇಶ್ ಯಾದವ್ ಮೈತ್ರಿಯಿಂದಾಗಿ ಬಿಜೆಪಿ ಓಟಕ್ಕೆ ಬ್ರೇಕ್ ಬೀಳಲಿದೆ. ಈ ಬಾರಿ 2014ರಲ್ಲಿ ಪ್ರಕಟಗೊಂಡ ಫಲಿತಾಂಶ ಉತ್ತರಪ್ರದೇಶದಲ್ಲಿ ಬರುವುದಿಲ್ಲ ಎಂದರು.

JDS COngress 4

ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಫಲಿತಾಂಶ ಬಂದ ಬಳಿಕ ನಮ್ಮಲ್ಲಿ ಕೆಲ ವಿಚಾರಗಳಲ್ಲಿ ವಿರೋಧ ಕಂಡು ಬಂದರೂ ಎಲ್ಲರೂ ಒಬ್ಬರು ನಾಯಕರನ್ನು ಒಪ್ಪಿಕೊಳ್ಳಲೇಬೇಕು. ಪ್ರಸ್ತುತ ದೇಶದಲ್ಲಿ ನರೇಂದ್ರ ಮೋದಿ ಅಲೆ ಕಡಿಮೆಯಾಗುತ್ತಿದ್ದು, ಆಡಳಿತ ವಿರೋಧಿ ಅಲೆ ಜಾಸ್ತಿಯಾಗುತ್ತಿದೆ ಎಂದು ಉತ್ತರಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *