ಕೈ ಶಾಸಕರನ್ನು ದಿನೇಶ್ ಗುಂಡೂರಾವ್ ಹತೋಟಿಯಲ್ಲಿಡಲಿ, ನನಗೆ ಸಲಹೆ ಕೊಡಬೇಡಿ ಎಂದ ರೇವಣ್ಣ!

Public TV
3 Min Read
dinesh gundu rao and revanna

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನನಗೆ ಸಲಹೆ ನೀಡುವುದು ಬೇಡ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಟಾಂಗ್ ನೀಡಿದ್ದಾರೆ. ದಿನೇಶ್ ಗುಂಡೂರಾವ್ ಅವರಿಂದ ಯಾವುದೇ ಎಚ್ಚರಿಕೆ ಪಡೆಯುವ ಅವಶ್ಯಕತೆ ನನಗೆ ಇಲ್ಲ. ದಿನೇಶ್ ಗುಂಡೂರಾವ್ ಅವರಿಗೆ ಮೊದಲು ಅವರ ಶಾಸಕರನ್ನು ಹತೋಟಿಯಲ್ಲಿ ಇಟ್ಟುಕೊಳ್ಳೋಕೆ ಹೇಳಿ. ನನ್ನನ್ನು ನೋಡಿಕೊಳ್ಳುವ ಅವಶ್ಯಕತೆ ದಿನೇಶ್ ಗುಂಡೂರಾವ್ ಗೆ ಬೇಡ. ನನ್ನ ಅಧ್ಯಕ್ಷರು ಹೇಳಿದಂತೆ ನಾನು ಕೇಳುತ್ತೇನೆ ಎಂದು ತಿರುಗೇಟು ನೀಡಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು 5 ಬಾರಿ ಶಾಸಕನಾಗಿದ್ದೇನೆ. ನನಗೂ ರಾಜಕೀಯ ಗೊತ್ತು. ದಿನೇಶ್ ಗುಂಡೂರಾವ್ ನನಗೆ ಅಡ್ವೈಸ್ ಮಾಡೋದು ಬೇಡ. ಅವರ ಪಕ್ಷ ಅವರು ನೋಡಿಕೊಳ್ಳಲಿ. ನನಗೆ ಎಚ್ಚರಿಕೆ ಕೊಡೋಕೆ ದೇವೇಗೌಡರು, ಕುಮಾರಸ್ವಾಮಿ ಇದ್ದಾರೆ. ದಿನೇಶ್ ಗುಂಡೂರಾವ್ ಅವರಿಂದ ಏನೂ ಕೇಳುವ ಅಗತ್ಯ ಇಲ್ಲ ಎಂದರು. ನಾನು ಯಾವುದೇ ನಿಗಮ ಮಂಡಳಿ ಸ್ಥಾನದಲ್ಲಿ ಹಸ್ತಕ್ಷೇಪ ಮಾಡಿಲ್ಲ. ನನ್ನ ಇಲಾಖೆ ಜವಾಬ್ದಾರಿ ನಾನು ನಿರ್ವಹಣೆ ಮಾಡುತ್ತಿದ್ದೇನೆ. ನಿಗಮ-ಮಂಡಳಿ ನೇಮಕ ವಿಚಾರ ದೇವೇಗೌಡರು, ಕುಮಾರಸ್ವಾಮಿ ತೀರ್ಮಾನ ಮಾಡ್ತಾರೆ ಎಂದು ದಿನೇಶ್ ಗುಂಡೂರಾವ್ ಹೇಳಿಕೆಗೆ ರೇವಣ್ಣ ತಿರುಗೇಟು ನೀಡಿದರು. ಅಲ್ಲದೇ ಸಮ್ಮಿಶ್ರ ಸರ್ಕಾರದ ಯಾವುದೇ ವಿಷಯ ಇದ್ದರೂ ದೇವೇಗೌಡ, ಕುಮಾರಸ್ವಾಮಿ, ಎಚ್ ವಿಶ್ವನಾಥ್ ನೋಡಿಕೊಳ್ತಾರೆ. ನನಗೆ ಸಚಿವ ಸ್ಥಾನ ಕೊಟ್ಟಿದ್ದಾರೆ, ನಾನು ಅದನ್ನು ನಿಭಾಯಿಸುತ್ತೇನೆ ಎಂದರು.

hd revanna

ಗುಂಡಿ ಮುಚ್ಚಿ: ಲೋಕೋಪಯೋಗಿ ಇಲಾಖೆ ಅಧೀನದಲ್ಲಿ ಬರುವ ಗುಂಡಿಗಳನ್ನ ಮುಚ್ಚಲು ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ. ಈಗ ಮಳೆ ಕಡಿಮೆ ಇದೆ. ಗುಂಡಿಗಳನ್ನು ಮುಚ್ಚುವಂತೆ ಆದೇಶ ನೀಡಿದ್ದೇನೆ. ಶೀಘ್ರವೇ ಗುಂಡಿ ಮುಚ್ಚುವ ಕೆಲಸ ಮಾಡುತ್ತೇವೆ ಎಂದರು. ಇದಲ್ಲದೇ ಅಪಘಾತ ವಲಯ ಹುಡುಕಿ ರಿಪೇರಿ ಮಾಡುವಂತೆ ಸೂಚನೆ ನೀಡಲಾಗಿದೆ. ಶಾಲಾ ಸಂಪರ್ಕ ಸೇತುವೆ 8 ಜಿಲ್ಲೆಗಳಲ್ಲಿ ನಿರ್ಮಾಣ ಮಾಡಲು ಕೈಗೆತ್ತಿಕೊಳ್ಳುತ್ತಿದ್ದೇವೆ. ಸಿಎಂ ಸೂಚನೆ ಮೇರೆಗೆ ಚಿಕ್ಕ ಸೇತುವೆ ನಿರ್ಮಾಣ ಮಾಡಲಿದ್ದೇವೆ. ಇದಕ್ಕಾಗಿ 120 ಕೋಟಿ ಹಣ ಸಿಎಂ ಕೊಟ್ಟಿದ್ದಾರೆ. ಇನ್ನೊಂದು ತಿಂಗಳಲ್ಲಿ ಟೆಂಡರ್ ಕರೆದು ಕೆಲಸ ಪ್ರಾರಂಭ ಮಾಡುತ್ತೇವೆ ಎಂದರು.

ನಿನ್ನೆ ದೇವೇಗೌಡರು ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ. ನಮ್ಮ ಬಳಿ ನೋಟ್ ಪ್ರಿಂಟ್ ಮಾಡೋ ಯಂತ್ರ ಇಲ್ಲ. ಇತಿಮಿತಿಯ ಆರ್ಥಿಕತೆಯಲ್ಲಿ ಕೆಲಸ ಮಾಡ್ತಿದ್ದೇವೆ. ಹೀಗಿದ್ರೂ ಜನರ ಕಷ್ಟ ಸರಿಪಡಿಸಲು ಆಗ್ತಿಲ್ಲ ಎಂಬ ನೋವು ದೇವೇಗೌಡರದ್ದು. ಅಧಿಕಾರ ಇದ್ದರೂ ಜನರ ನೋವು ಸರಿ ಮಾಡಲು ಆಗ್ತಿಲ್ಲ ಎಂಬ ಭಾವನೆಯಲ್ಲಿ ದೇವೇಗೌಡರು ನೋವಿನಿಂದ ಮಾತಾಡಿದ್ದಾರೆ. ದೇವೇಗೌಡರು 60 ವರ್ಷದ ರಾಜಕಾರಣ ಮಾಡಿದವರು. ಜನರಿಗೆ ಏನೂ ಮಾಡೋಕಾಗುತ್ತಿಲ್ಲ ಎಂಬ ದುಃಖ ದೇವೇಗೌಡರಿಗಿದೆ. ದೇವೇಗೌಡರು ರಾತ್ರೋರಾತ್ರಿ ರಾಜೀನಾಮೆ ಬಿಸಾಕಿ ಬಂದವರು. ಯಾವತ್ತೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ, ಜನರಿಗಾಗಿ ಕೆಲಸ ಮಾಡಿದವರು ಎಂದು ಅಪ್ಪನ ಪರ ಬ್ಯಾಟಿಂಗ್ ಮಾಡಿದರು.

HDD Cry copy

ಸಪ್ಲಿಮೆಂಟರಿ ಬಜೆಟ್ ನನಗಾಗಿ ಇಟ್ಟಿಲ್ಲ. ಗುತ್ತಿಗೆದಾರರ ಹಣ ಪಾವತಿ ಮಾಡಲು ಕೊಟ್ಟಿದ್ದಾರೆ. ಇದು ಕೇವಲ ನಮ್ಮ ಕಾಲದಲ್ಲಿ ಮಾತ್ರ ಆಗಿಲ್ಲ. ಪ್ರತಿ ಸರ್ಕಾರದಲ್ಲೂ ಆಗಿದೆ. ಹಿಂದಿನ ಯೋಜನೆಗೆ ಹಣ ಬಿಡುಗಡೆ ಮಾಡಲು 2 ಸಾವಿರ ಕೋಟಿ ನನ್ನ ಇಲಾಖೆಗೆ ಕೊಟ್ಟಿದ್ದಾರೆ. ನನ್ನ ಮನೆಗೆ ಆ ಹಣ ಎತ್ತಿಕೊಂಡು ಹೋಗಲ್ಲ. ಹಿಂದೆ ಸಾಲ ಮಾಡಿ ಗುತ್ತಿಗೆದಾರರು ಕೆಲಸ ಮಾಡಿದ್ದಾರೆ. ಗುತ್ತಿಗೆದಾರರ ಹಣ ಬಾಕಿ ಇದೆ. ಬಾಕಿ ನೀಡಲು ಹಣ ಕೊಟ್ಟಿದ್ದಾರೆ. ಸುಮಾರು 3700 ಕೋಟಿ ರೂಪಾಯಿ ಗುತ್ತಿಗೆದಾರರ ಹಣ ಬಾಕಿ ಇದೆ. ಹೀಗಾಗಿ ನನ್ನ ಇಲಾಖೆಗೆ ಹೆಚ್ಚು ಹಣ ಕೊಟ್ಟಿದ್ದಾರೆ ಎಂದು ರೇವಣ್ಣ ಸ್ಪಷ್ಟನೆ ನೀಡಿದರು.

ಸ್ಟೀಲ್ ಬ್ರಿಡ್ಜ್ ಬಗ್ಗೆ ನೋ ಕಮೆಂಟ್ಸ್!: ಸ್ಟೀಲ್ ಬ್ರಿಡ್ಜ್ ಯೋಜನೆ ನನ್ನ ಇಲಾಖೆಯ ಯೋಜನೆ ಅಲ್ಲ. ಕಾರ್ಪೋರೇಷನ್ ಲಿಮಿಟ್ಸ್ ಯೋಜನೆ. ಇದನ್ನ ಆ ಇಲಾಖೆಗೆ ಸಂಬಂಧಪಟ್ಟ ಮಂತ್ರಿಗೆ ಕೇಳಬೇಕು. ಈ ಬಗ್ಗೆ ಸಿಎಂ ಕುಳಿತು ನಿರ್ಧಾರ ಮಾಡ್ತಾರೆ. ಕುಮಾರಸ್ವಾಮಿ ಹಿಂದೆ ವಿರೋಧ ಮಾಡಿರಲಿಲ್ಲ. ಆತುರವಾಗಿ ಮಾಡ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದರು. ಜನ ವಿರೋಧ ಮಾಡಿದ್ರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾತನಾಡಿ ಯೋಜನೆ ಮಾಡಬೇಕು. ಈ ಬಗ್ಗೆ ಸಿಎಂ, ಸಚಿವರು ಕುಳಿತು ನಿರ್ಧಾರ ಮಾಡಲಿ. ಅಕ್ರಮ ಎಂದಾದರೆ ಈ ಬಗ್ಗೆಯೂ ಚರ್ಚೆ ಮಾಡಲಿ ಎಂದರು.

steel bridge 2

ಬಜೆಟ್ ಗೆ ಮುಹೂರ್ತ ನಾನು ಇಡಲ್ಲ!: ಬಜೆಟ್ ಗೆ ನಾನು ಮುಹೂರ್ತ ಇಡೋದಲ್ಲ ಎಂದು ಸಚಿವ ರೇವಣ್ಣ ಸ್ಪಷ್ಟನೆ ನೀಡಿದ್ದಾರೆ. ಬಜೆಟ್ ಗೆ ರೇವಣ್ಣ ಶಾಸ್ತ್ರ ನೋಡಿ ದಿನಾಂಕ ಫಿಕ್ಸ್ ಮಾಡಬೇಕು ಎಂಬ ಸಿಎಂ ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯೆ ಕೊಟ್ಟ ಅವ್ರು, ರೇವಣ್ಣ ದಿನ ನಿಗದಿ ಮಾಡ್ತಾರೆ ಎಂದು ಸಿಎಂ ತಮಾಷೆಗೆ ಹೇಳಿದ್ದಾರೆ. ಬಜೆಟ್ ದಿನಾಂಕ ನಿಗದಿ ಮಾಡೋದು ಕ್ಯಾಬಿನೆಟ್. ಅಲ್ಲಿ ಚರ್ಚೆ ಮಾಡಿ ನಂತರ ರಾಜ್ಯಪಾಲರಿಗೆ ಕಳುಹಿಸುತ್ತಾರೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *