ಬೆಂಗಳೂರು: ಫೇಸ್‍ಬುಕ್ ನಲ್ಲಿ ಲೈವ್ ಮಾಡಿ ಮೆಕ್ಯಾನಿಕ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಅಸಿಬ್ ಖಾನ್ (27) ಆತ್ಮಹತ್ಯೆಗೆ ಶರಣಾದ ಮೆಕ್ಯಾನಿಕ್. ಮೃತ ಅಸಿಬ್ ಖಾನ್ ಏಳು ವರ್ಷಗಳ ಹಿಂದೆ ಆಂಧ್ರದಿಂದ ಸರ್ಜಾಪುರಕ್ಕೆ ಬಂದು ನೆಲೆಸಿದ್ದನು. ಮಹೇಶ್ ಎಂಬವನಿಂದ ವಂಚನೆಗೊಳಾಗಿ ಫೇಸ್ ಬುಕ್ ನಲ್ಲಿ ಲೈವ್ ಮಾಡಿ ನೇಣಿಗೆ ಶರಣಾಗಿದ್ದಾನೆ.
ಮಹೇಶ್
ಮೃತ ಅಸಿಬ್ ಖಾನ್ ಗೆ ಮೆಕ್ಯಾನಿಕ್ ಕೆಲಸ ಬಿಟ್ಟು ವ್ಯಾಪಾರ ಮಾಡೋಣ ಎಂದು ಮಹೇಶ್ ಹಣವನ್ನು ತೆಗೆದುಕೊಂಡಿದ್ದನು. ಆದರೆ ದುಡಿದ ಹಣವನ್ನು ಮಹೇಶ್ ಪಡೆದು ವಂಚನೆ ಮಾಡಿದ್ದಾನೆಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಸಾವಿಗೆ ನ್ಯಾಯ ದೊರಕಿಸುವಂತೆ ಸಚಿವ ಜಮೀರ್ ಖಾನ್ ಗೆ ಮನವಿ ಮಾಡಿದ್ದಾನೆ. ಅಷ್ಟೇ ಅಲ್ಲದೇ ಆಂಧ್ರ ಪ್ರದೇಶದಲ್ಲಿ ವೈಎಸ್‍ಆರ್ ಜಗನ್ ಗೆ ಮತ ನೀಡುವಂತೆ ಹೇಳಿದ್ದಾನೆ.
ವಿಡಿಯೋದಲ್ಲಿ ಏನಿದೆ?
ನಾನು ಆಂಧ್ರ ಪ್ರದೇಶ ಹಿಂದೂಪುರದ ನಿವಾಸಿಯಾಗಿದ್ದು, ಹಿಂದೂಪುರದಿಂದ ಬೆಂಗಳೂರಿಗೆ ಬಂದು ಬಹಳ ಕಷ್ಟದಿಂದ ವಾಹನಗಳನ್ನು ತೊಳೆಯುವ ಕೆಲಸ ಮಾಡುತ್ತಿದ್ದೆ. ನನ್ನ ಕಷ್ಟದ ಪ್ರತಿಫಲವಾಗಿ ನನ್ನ ವ್ಯವಹಾರವೂ ಚೆನ್ನಾಗಿ ನಡೆಯುತ್ತಿತ್ತು. ನಾನು ಕೂಡ ಸಂತೋಷವಾಗಿದ್ದೆ. ಇದೇ ವೇಳೆ ಮಹೇಶ್ ಪರಿಚಯವಾಗಿ ತನ್ನ ಜೊತೆ ವ್ಯವಹಾರದಲ್ಲಿ ಕೈ ಜೋಡಿಸಲು ಪೀಡಿಸಿದನು. ಅಲ್ಲದೆ ನಾನು ಕಷ್ಟಪಟ್ಟು ಮಾಡಿದ ಅಂಗಡಿಯನ್ನು ಮಾರಾಟ ಮಾಡಿಸಿ ವ್ಯವಹಾರಕ್ಕಾಗಿ ಹಣ ಪಡೆದುಕೊಂಡಿದ್ದನು.
ಬಳಿಕ ವ್ಯವಹಾರದಿಂದ ಬಂದ ಲಾಭದ ಹಣ ಹಾಗೂ ನಾನು ನೀಡಿದ ಹಣ ಕೇಳಲು ಹೋದರೆ ನೆಪ ಮೇಲೆ ನೆಪ ಹೇಳುತ್ತಿದ್ದನು. ಈ ವ್ಯವಹಾರದ ಬಳಿಕ ನನ್ನ ಮನೆಯ ಮಾಲೀಕ ನನಗೆ ಹಣಕಾಸಿನ ಸಹಾಯ ಮಾಡಿದ್ದಾರೆ. ಇದೀಗ ಮತ್ತೆ ಅವರ ಬಳಿ ಸಹಾಯ ಕೇಳಲು ನನಗೆ ನಾಚಿಕೆಯಾಗುತ್ತಿದೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನಗೆ ಬರಬೇಕಾದ 1 ಲಕ್ಷ 20 ಸಾವಿರ ರೂಪಾಯಿ ಹಣವನ್ನ ನನ್ನ ಮಾಲೀಕನಿಗೆ ನೀಡಿ. ನನಗೆ ಮೋಸ ಮಾಡಿದ ಮಹೇಶ್ ಗೆ ಶಿಕ್ಷೆಯಾಗಬೇಕು. ಸರ್ಜಾಪುರದಲ್ಲಿರುವ ಕಟಿಂಗ್ ಸೀನಾ, ಓಂ ಶಕ್ತಿ ಮಂಜು ಹಾಗೂ ಸಚಿವ ಜಮೀರ್ ಅಹ್ಮದ್ ಅವರು ಈ ವಿಷಯದಲ್ಲಿ ಬೆಂಬಲಿಸಿ ನನಗೆ ನ್ಯಾಯ ಕೂಡಿಸಿ. ವಂಚಕ ಮಹೇಶ್ ಬಿಟ್ಟರೆ ನನ್ನ ಸಾವಿಗೆ ಯಾರೊಬ್ಬರೂ ಕಾರಣರಲ್ಲ, ಯಾರಿಗೂ ತೊಂದರೆ ಕೊಡಬೇಡಿ ಎಂದು ಹೇಳಿದ್ದಾನೆ.
ಇತ್ತ ವಂಚಕ ಮಹೇಶ್ ರಾತ್ರೋರಾತ್ರಿ ಊರು ಬಿಟ್ಟು ಹೋಗಿದ್ದಾನೆ. ಈ ಕುರಿತು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv