ರಾಜಶೇಖರ್ ನಿರ್ದೇಶನದ ಪರದೇಸಿ ಕೇರಾಫ್ ಲಂಡನ್ ಈ ತಿಂಗಳು ತೆರೆ ಕಾಣಲಿದೆ. ಈಗಾಗಲೇ ಹಾಡುಗಳ ಮೂಲಕವೂ ಭಾರೀ ಕ್ರೇಜ್ ಸೃಷ್ಟಿಸಿರೋ ಈ ಚಿತ್ರ ವಿಜಯ್ ರಾಘವೇಂದ್ರ ಅವರ ವೃತ್ತಿ ಬದುಕಲ್ಲಿ ಹೊಸ ತಿರುವು ನೀಡಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ರಾಜಶೇಖರ್ ಅಂಥಾದ್ದೊಂದು ರಸವತ್ತಾದ ಕಥನವನ್ನಿಲ್ಲಿ ದೃಶ್ಯ ರೂಪಕವಾಗಿಸಿದ್ದಾರೆ.
ವಿಜಯ್ ರಾಘವೇಂದ್ರರನ್ನು ಹೊಸ ಗೆಟಪ್ಪಿನಲ್ಲಿ ಕಾಣಿಸಬೇಕೆಂಬ ಹಂಬಲದೊಂದಿಗೆ ಈ ಕಥೆಯನ್ನು ಸಿದ್ಧಪಡಿಸಿದ್ದವರು ರಾಜಶೇಖರ್. ಚಿತ್ರೀಕರಣವನ್ನೆಲ್ಲ ಅಚ್ಚುಕಟ್ಟಾಗಿಯೇ ಮಾಡಿ ಮುಗಿಸಿದ್ದ ಅವರು ಪ್ರತಿಯೊಂದು ವಿಚಾರದಲ್ಲಿಯೂ ಅದೇ ದೃಷ್ಟಿಯಿಂದಲೇ ಕಾರ್ಯ ನಿರ್ವಹಿಸಿದ್ದರು. ಹಾಡುಗಳ ವಿಚಾರದಲ್ಲಿ ಅವರು ವಹಿಸಿದ್ದ ಮುತುವರ್ಜಿಯೇ ಈ ಮಾತಿಗೆ ಸಾಕ್ಷಿಯಾಗುತ್ತೆ.
ಸಾಮಾನ್ಯವಾಗಿ ಇತ್ತೀಚಿನ ಚಿತ್ರಗಳ ಹಾಡುಗಳಿಗೆ ಒಂದೋ ಪರಭಾಷಾ ಗಾಯಕ, ಗಾಯಕಿಯರಾಗಬೇಕು. ಇಲ್ಲದಿದ್ದರೆ ಕನ್ನಡದ ಖ್ಯಾತನಾಮರೇ ಹಾಡಬೇಕೆಂಬ ಟ್ರೆಂಡಿದೆ. ಕೆಲ ಮಂದಿ ಅದರ ಆಚೀಚೆಗೆ ದೃಷ್ಟಿ ಹಾಯಿಸಿದ್ದಿದೆ. ಆದರೆ ರಾಜಶೇಖರ್ ಅಪ್ಪಟ ಈ ನೆಲದ ಅಪರೂಪದ ಮಹಿಳೆಯೋರ್ವರಿಂದ ಒಂದು ಹಾಡನ್ನು ಹಾಡಿಸಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕೋಗಿಲೆ ಎಂಬ ಹಾಡಿನ ಶೋನ ಮೂಲಕ ಪ್ರಸಿದ್ಧಿ ಪಡೆದವರು ಗಂಗಮ್ಮ. ಹಳ್ಳಿಗಾಡಿನಿಂದ ಬಂದಿರೋ ಗಂಗಮ್ಮ ಯಾವ ಥರದ ಹಾಡನ್ನೇ ಆದರೂ ಶ್ರುತಿಬದ್ಧವಾಗಿ, ಎಂಥವರೂ ತಲೆದೂಗುವಂತೆ ಹಾಡುವ ಕಲೆಗಾರಿಕೆಯ ಮೂಲಕವೇ ಗಾನಕೋಗಿಲೆ ಗಂಗಮ್ಮ ಎಂದೇ ಪ್ರಸಿದ್ಧರಾಗಿದ್ದಾರೆ. ರಾಜಶೇಖರ್ ತಮ್ಮ ಚಿತ್ರಕ್ಕಾಗಿ ಗಂಗಮ್ಮನವರಿಂದಲೇ ಒಂದು ಚೆಂದದ ಹಾಡನ್ನು ಹಾಡಿಸಿದ್ದಾರೆ. ಇದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. ಈ ಹಾಡೂ ಕೂಡಾ ಜನಮನ ಗೆದ್ದಿದೆ. ಈ ಮೂಲಕವೇ ಈ ಚಿತ್ರದ ಬಗ್ಗೆ ಎಲ್ಲೆಡೆ ಒಳ್ಳೆ ಮಾತುಗಳು ಹರಡಿಕೊಂಡಿವೆ. ಅದೆಲ್ಲವೂ ಗೆಲುವಾಗುವ ಸ್ಪಷ್ಟ ಸೂಚನೆಗಳೂ ಇವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv