ಇಂಟರ್‌ನೆಟ್‌ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಲ್ಲ ಜಿಸ್ಯಾಟ್-11 ಉಪಗ್ರಹ ಉಡಾವಣೆ ಯಶಸ್ವಿ: 1 ಸೆಕೆಂಡಿಗೆ ಎಷ್ಟು ಜಿಬಿ ಡೇಟಾ ಸೆಂಡ್ ಮಾಡಬಹುದು?

Public TV
2 Min Read
gsat main

ನವದೆಹಲಿ: ಭಾರತದ ಇಂಟರ್ ನೆಟ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಲ್ಲ ಭಾರೀ ತೂಕದ ಜಿಸ್ಯಾಟ್-11 ಉಪಗ್ರಹದ ಉಡಾವಣೆ ಯಶಸ್ವಿಯಾಗಿದೆ. ಭಾರತೀಯ ಕಾಲಮಾನ ಬುಧವಾರ ನಸುಕಿನ ಜಾವ 2.07ಕ್ಕೆ ಏರಿಯಾನ್ ರಾಕೆಟ್ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಯಿತು.

ಫ್ರೆಂಚ್ ಗಯಾನಾದಿಂದ ಏರಿಯಾನ್ 5 ರಾಕೆಟ್ ಮೂಲಕ ಉಡಾವಣೆಯಾದ ಉಪಗ್ರಹ 29 ನಿಮಿಷದಲ್ಲಿ ನಿಗದಿತ ಕಕ್ಷೆಯನ್ನು ತಲುಪಿದೆ ಎಂದು ಇಸ್ರೋ ಹೇಳಿದೆ.

GSAT 11

ಯಾಕೆ ಉಡಾವಣೆ?
500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಪಗ್ರಹ 5,854 ಕೆ.ಜಿ. ತೂಕವನ್ನು ಹೊಂದಿದ್ದು, 15 ವರ್ಷ ಜೀವಿತಾವಧಿಯನ್ನು ಹೊಂದಿದೆ. ಭೂಮಿಯಿಂದ 36 ಸಾವಿರ ಕಿ.ಮೀ. ಎತ್ತರದ ಕಕ್ಷೆಯಲ್ಲಿ ಕಾರ್ಯನಿರ್ವಹಿಸಲಿರುವ ಜಿಸ್ಯಾಟ್-11 ಉಪಗ್ರಹವು ನಾಲ್ಕು ಸೋಲಾರ್ ಪ್ಯಾನಲ್‍ಗಳನ್ನು ಹೊಂದಿದೆ. ಭಾರತದ ಗ್ರಾಮೀಣ ಹಾಗೂ ದ್ವೀಪ ಪ್ರದೇಶಗಳಲ್ಲಿ ಉತ್ತಮ ಇಂಟರ್ ನೆಟ್ ಸೇವೆ ನೀಡಲು ಇಸ್ರೋ ಈ ಉಪಗ್ರಹವನ್ನು ಉಡಾವಣೆ ಮಾಡಿದೆ. ಇನ್‍ಸ್ಯಾಟ್ ಕಡಿಮೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಜಿಸ್ಯಾಟ್-11 ಅಭಿವೃದ್ಧಿ ಪಡಿಸಿದೆ. ಇದನ್ನು ಓದಿ: ವಿಶ್ವದಲ್ಲಿ ಆರಂಭಗೊಂಡಾಗ ಭಾರತದಲ್ಲೂ ಬಿಎಸ್‍ಎನ್‍ಎಲ್‍ನಿಂದ ಸಿಗಲಿದೆ 5ಜಿ ಸೇವೆ!

gsat 04 e1543975637769

ಇಂಟರ್ ನೆಟ್ ಕ್ರಾಂತಿ ಹೇಗೆ?
ಜಿಸ್ಯಾಟ್-11 ನಲ್ಲಿ ಕೆಯು ಮತ್ತು ಕೆಎ ಬ್ಯಾಂಡಿನ 40  ಟ್ರಾನ್ಸ್‌ಪಾಂಡರ್ಗಳಿವೆ. ಇವು ಪ್ರತಿ ಸೆಕೆಂಡಿಗೆ 14 ಗಿಗಾಬೈಟ್ ದತ್ತಾಂಶಗಳನ್ನು ವರ್ಗಾವಣೆ ಮಾಡುವ ಸಾಮರ್ಥ್ಯ ವನ್ನು ಪಡೆದುಕೊಂಡಿದೆ. ಜಿಸ್ಯಾಟ್ 19, 29, 11, 20 ಉಪಗ್ರಹಗಳು ಎಲ್ಲವೂ ಕಾರ್ಯನಿರ್ವಹಿಸಿದರೆ 2019ರ ವೇಳೆಗೆ ಪ್ರತಿ ಸೆಕೆಂಡಿಗೆ 100 ಗಿಗಾ ಬೈಟ್ ವೇಗದಲ್ಲಿ ದತ್ತಾಂಶಗಳನ್ನು ವರ್ಗಾವಣೆ ಮಾಡಬಹುದು ಎಂದು ಇಸ್ರೋ ಅಧ್ಯಕ್ಷ ಕೆ ಸಿವನ್ ಹೇಳಿದ್ದಾರೆ. ನಾಲ್ಕು ಉಪಗ್ರಹಗಳ ಪೈಕಿ ಜಿಸ್ಯಾಟ್ 19, ಜಿಸ್ಯಾಟ್ 29 ಉಪಗ್ರಹಗಳನ್ನು ಈಗಾಗಲೇ ಉಡಾವಣೆ ಮಾಡಲಾಗಿದ್ದು, ಜಿಸ್ಯಾಟ್-20 ಮುಂದಿನ ವರ್ಷ ಉಡಾವಣೆಯಾಗಲಿದೆ. ಇದನ್ನು ಓದಿ: 2020ರ ವೇಳೆಗೆ ಭಾರತದಲ್ಲಿ ಬರುತ್ತೆ 5ಜಿ: ನೆಟ್ ಸ್ಪೀಡ್ ಎಷ್ಟು ಗೊತ್ತಾ?

GSAT 11 3

ಉಡಾವಣೆಯಲ್ಲಿ ವಿಳಂಬವಾಗಿದ್ದು ಯಾಕೆ?
ಜಿಸ್ಯಾಟ್-11 ಉಪಗ್ರಹವನ್ನು ಇದೇ ಮಾರ್ಚ್, ಎಪ್ರಿಲ್ ಮಧ್ಯ ಭಾಗದಲ್ಲಿ ಉಡಾವಣೆ ಮಾಡಲು ಇಸ್ರೋ ನಿರ್ಧರಿಸಿತ್ತು. ಈ ಉಪಗ್ರಹ ಉಡಾವಣೆಗೆ ಕೈ ಹಾಕಿದ ಸಮಯದಲ್ಲೇ ಜಿಸ್ಯಾಟ್-6 ಉಪಗ್ರಹವನ್ನು ಇದೇ ವರ್ಷ ಮಾರ್ಚ್ 29ರಂದು ನಭಕ್ಕೆ ಕಳುಹಿಸಲಾಗಿತ್ತು. ಆದರೆ ಉಪಗ್ರಹದಲ್ಲಿ ಎಲೆಕ್ಟ್ರಿಕ್ ಸರ್ಕ್ಯೂಟ್ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಉಡಾವಣೆ ವಿಫಲವಾಗಿತ್ತು. ಈ ಕಾರಣಕ್ಕೆ ಜಿಸ್ಯಾಟ್11 ಉಪಗ್ರಹವನ್ನು ಹಿಂದಕ್ಕೆ ತರಿಸಿದ್ದ ಇಸ್ರೋ ಎಲ್ಲ ಪರೀಕ್ಷೆಗಳನ್ನು ಮಾಡಿ ಈಗ ಉಡಾವಣೆ ಮಾಡಿದೆ.

ಫ್ರೆಂಚ್ ಗಯಾನಾದಲ್ಲಿ ಯಾಕೆ?
ಇಸ್ರೋ ಅಭಿವೃದ್ಧಿ ಪಡಿಸಿರುವ ಜಿಎಸ್‍ಎಲ್‍ವಿ 3 ರಾಕೆಟ್ ಗರಿಷ್ಠ 4 ಟನ್ ತೂಕದ ಉಪಗ್ರಹವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಪಡೆದಿದೆ. ಜಿಸ್ಯಾಟ್ 5 ಟನ್ ಇರುವ ಕಾರಣ ಏರಿಯಾನ್ ರಾಕೆಟ್ ಬಳಸಿ ಫ್ರೆಂಚ್ ಗಯಾನಾದಿಂದ ಹಾರಿಸಿದೆ. ಹೆಚ್ಚು ತೂಕದ ಉಪಗ್ರಹಗಳನ್ನು ಕಳುಹಿಸಲು ಇಸ್ರೋ ರಾಕೆಟ್ ತಯಾರಿ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಎಲಾನ್ ಮಸ್ಕ್ ರಾಕೆಟ್ ಕಂಪನಿ, ಸ್ಪೇಸ್ ಎಕ್ಸ್ ಜೊತೆಗೆ ಮಾತುಕತೆ ನಡೆಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *