ಚಿಕ್ಕಮಗಳೂರು: ಪ್ರವಾಸಿಗರ ಸ್ವರ್ಗವೆನಿಸಿಕೊಂಡಿರುವ ಚಿಕ್ಕಮಗಳೂರಲ್ಲಿ ಹತ್ತಾರು ಪ್ರವಾಸಿ ತಾಣಗಳಿದ್ದು, ಅದರಲ್ಲೂ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರ ಜಲಪಾತ ಪ್ರವಾಸಿಗರ ಫೆವರೇಟ್ ಸ್ಪಾಟ್ ಆಗಿದೆ. ನಿತ್ಯವೂ ಆಗಮಿಸುವ ನೂರಾರು ಪ್ರವಾಸಿಗರು ಇಲ್ಲಿನ ಜಲಧಾರೆಯಲ್ಲಿ ಮಿಂದೆದ್ದು, ಈ ನೀರನ್ನು ಕುಡಿದು ಪಾವನರಾಗುತ್ತೀವಿ ಎಂದುಕೊಂಡಿದ್ದಾರೆ. ಆದರೆ ಈ ನೀರು ಕುಡಿಯೋಕಲ್ಲ, ಸ್ನಾನಕ್ಕೂ ಯೋಗ್ಯವಲ್ಲದಷ್ಟು ಮಲೀನವಾಗಿದೆ.
ಕಾಫಿನಾಡು ಚಿಕ್ಕಮಗಳೂರಿನ ಬಾಬಬುಡನ್‍ಗಿರಿಯ ಸೊಬಗನ್ನು ನೋಡುವುದಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇಲ್ಲಿ ಇರುವ ಚಿಕ್ಕ ತೊರೆಯೇ ಮಾಣಿಕ್ಯಧಾರ. ಈ ನೀರನ್ನು ಕುಡಿದು ಅದರಲ್ಲಿ ಸ್ನಾನ ಮಾಡಿದರೆ, ಜೀವನ ಪಾವನವಾಗುತ್ತೆ ಎಂದು ಅದರಲ್ಲಿ ಸ್ನಾನ ಮಾಡುತ್ತಾರೆ. ಆದರೆ ಆ ನೀರು ಈಗ ಪವಿತ್ರವಾಗಿಲ್ಲ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಈ ಜಲಪಾತದ ನೀರನ್ನು ಸಂಶೋಧನೆಗೆ ಒಳಪಡಿಸಿದಾಗ, ನೀರಿನಲ್ಲಿ ಮನುಷ್ಯರ ಮಲ, ಮೂತ್ರದಂಶದ ಎಫ್-ಕೊಲಿಫಾರಂ ಪತ್ತೆಯಾಗಿದ್ದು, ಕುಡಿಯಲು ಯೋಗ್ಯವಲ್ಲ ಅಂತಾ ಹೇಳಿದೆ.
ಈ ಮಾಣಿಕ್ಯಧಾರಕ್ಕೆ ಬರುವ ಪ್ರವಾಸಿಗರು, ಜಲಪಾತ ಹುಟ್ಟೋ ಜಾಗದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದು, ಹಾಗಾಗಿ ನೀರಿನಲ್ಲಿ ಎಫ್-ಕೊಲಿಫಾರಂ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಶ್ಯಾಂಪು, ಸೋಪು ಇತ್ಯಾದಿ ರಾಸಾಯನಿಕಗಳನ್ನು ಬಳಸಿ ಸ್ನಾನ ಮಾಡೋದರ ಜೊತೆಗೆ ಬಟ್ಟೆಯನ್ನು ಬಿಸಾಡಿ ಹೋಗುವುದರಿಂದ, ನೀರು ಕಲುಷಿತಗೊಳ್ಳೋದರ ಜೊತೆ ಪರಿಸರವೂ ಹಾಳಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ಸ್ಥಳೀಯರು ಹೇಳಿದ್ದಾರೆ.
ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ಮಾಣಿಕ್ಯಧಾರ ಇದೀಗ ಮಾಲಿನ್ಯ ಭರಿತವಾಗಿರೋದು ಜನರಲ್ಲಿ ಆತಂಕ ಮೂಡಿಸಿದೆ. ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಮಾಣಿಕ್ಯಧಾರದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಜೊತೆಗೆ ಪಾವಿತ್ರ್ಯತೆಯನ್ನು ಉಳಿಸಲು ಕ್ರಮಕೈಗೊಳ್ಳಬೇಕಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv