ವಾಷಿಂಗ್ಟನ್: ಅಮೆರಿಕ ಮೂಲದ ಕಾರು ಉತ್ಪಾದಕ ಸಂಸ್ಥೆ ಜನರಲ್ ಮೋಟಾರ್ಸ್ ಗೆ ಚೀನಾದಲ್ಲಿ ಉತ್ಪಾದನೆ ನಿಲ್ಲಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ ಎನ್ನುವ ಮಾಹಿತಿಯನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕದ ಪ್ರಖ್ಯಾತ ಕಾರು ತಯಾರಿಕಾ ಸಂಸ್ಥೆಯಾದ ಜನರಲ್ ಮೋಟಾರ್ಸ್ ಚೀನಾದಲ್ಲಿ ಉತ್ಪಾದನಾ ಘಟಕವನ್ನು ಹೊಂದಿದೆ. ಆದರೆ ಈಗ ಈ ಘಟಕವನ್ನು ಸ್ಥಗಿತಗೊಳಿಸಿ ಅಮೆರಿಕದ ಬಹಿಯೊ ರಾಜ್ಯದಲ್ಲಿ ಘಟಕ ಸ್ಥಾಪಿಸಲು ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ಚೀನಾದಲ್ಲಿ ಸ್ಥಗಿತ ಮಾಡಲು ಹೇಳಿದ್ದೇಕೆ?
ಇತ್ತೀಚೆಗೆ ಜನರಲ್ ಮೋಟಾರ್ಸ್ ಕಂಪನಿ ತನ್ನ ಅಮೆರಿಕ ಮತ್ತು ಕೆನಡಾ ಘಟಕಗಳಲ್ಲಿರುವ 14,800 ಉದ್ಯೋಗಗಳನ್ನು ಕಡಿತಗೊಳಿಸಲು ಚಿಂತನೆ ನಡೆಸುತ್ತಿದ್ದು, ಇದರಿಂದಾಗಿ 2020ರ ಅಂತ್ಯಕ್ಕೆ ಕಂಪನಿಗೆ ಸುಮಾರು 4.5 ಬಿಲಿಯನ್ ಡಾಲರ್ ಉಳಿತಾಯವಾಗುತ್ತದೆಂದು ಘೋಷಿಸಿತ್ತು.ಕಂಪನಿಯ ನಿರ್ಧಾರವನ್ನು ಡೊನಾಲ್ಡ್ ಟ್ರಂಪ್ ಖುದ್ದು ಶ್ವೇತ ಭವನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಜನರಲ್ ಮೋಟಾರ್ಸ್ ತೀರ್ಮಾನ ನಮಗೆ ಒಪ್ಪಿಗೆ ಆಗಲಿಲ್ಲ ಅಂತ ಅಸಮಾಧಾನ ಹೊರಹಾಕಿದ್ದರು.
ಕಂಪನಿಯ ನಿರ್ಣಯದಿಂದ ಅಮೆರಿಕಾದ ಬಹಿಯೊ ಮತ್ತು ಮಿಚಿಗನ್ ರಾಜ್ಯಗಳ ಜನರ ಉದ್ಯೋಗದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹೀಗಾಗಿ ಜನರಲ್ ಮೋಟಾರ್ಸ್ ಚೀನಾದಲ್ಲಿರುವ ತಮ್ಮ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿ ಬಹಿಯೊದಲ್ಲಿ ಹೊಸ ಘಟಕವನ್ನು ಸ್ಥಾಪಿಸುವಂತೆ ಹೇಳಿತ್ತು. ಈ ಬಗ್ಗೆ ಜನರಲ್ ಮೋಟಾರ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬರ್ರೆ ಅವರಿಗೆ ತಿಳಿಸಿದ್ದಾರೆಂದು ಸ್ಥಳೀಯ ಸಂಸ್ಥೆಯೊಂದು ವರದಿ ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv