ಕೋಲಾರ: ಸದಾ ಕರ್ತವ್ಯದಲ್ಲಿದ್ದು ರೌಡಿಗಳನ್ನು ಮಟ್ಟ ಹಾಕುತ್ತಿದ್ದ ಜಿಲ್ಲೆಯ ಎಸ್‍ಪಿ ರೋಹಿಣಿ ಕಠೋಚ್ ಅವರು, ಮಹಿಳೆಯಾದರೂ ಸಮಾಜದಲ್ಲಿ ಎಂತಹ ಕಠಿಣ ಹುದ್ದೆಯನ್ನು ನಿಭಾಯಿಸಿದರೂ ಕೂಡಾ ತಾನೊಬ್ಬ ಹೆಣ್ಣು ತನ್ನಲ್ಲೂ ತಾಯಿ ಹೃದಯ, ಮಮತೆ, ಪ್ರೀತಿ ಇದೆ ಅನ್ನೋದನ್ನ ತೋರಿಸಿದ್ದಾರೆ.
ಕೋಲಾರ ತಾಲೂಕಿನ ಕುರುಗಲ್ ಗ್ರಾಮ ಪಂಚಾಯ್ತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ, ವಿಶೇಷ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ ಹಾಗೂ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಕೋಲಾರ ಎಸ್‍ಪಿ ರೋಹಿಣಿ ಕಠೋಚ್ ಆಗಮಿಸಿದ್ದರು. ಸಮಾಜದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಸಮಾಜದಲ್ಲಿ ಧೈರ್ಯವಾಗಿ ಬದುಕಬೇಕು ಎಂಬ ಕಿವಿಮಾತು ಹೇಳಿದ್ದಾರೆ. ಕಾರ್ಯಕ್ರಮಕ್ಕೆ ಬಂದಿದ್ದ ಹತ್ತಾರು ಗರ್ಭಿಣಿಯರಿಗೆ ತಾವೇ ಸ್ವತ: ಅರಿಶಿಣ ಕುಂಕುಮ ಹಚ್ಚಿ ಮಡಿಲು ತುಂಬುವ ಮೂಲಕ ತಾನೊಬ್ಬ ಅಧಿಕಾರಿಯಾಗಿ, ಅದಕ್ಕೂ ಮೊದಲು ತಾಯಿ ಮನಸ್ಸು ನನ್ನಲ್ಲಿದೆ ಅನ್ನೋದನ್ನು ತೋರಿಸಿದ್ದಾರೆ.
ವಿಶೇಷವಾಗಿ ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿ, ಗ್ರಾಮಸಭೆ ಹಾಗೂ ಗ್ರಾಮದ ಹೆಣ್ಣುಮಕ್ಕಳಿಗೆ ಸಾಮೂಹಿಕ ಸೀಮಂತ ಮಾಡುವ ಮೂಲಕ ಮಹಿಳೆಯರಿಗೆ ಗೌರವ, ಅವರನ್ನು ಮುಖ್ಯವಾಹಿನಿಗೆ ಕರೆತರುವ ಉದ್ದೇಶ ಕಾರ್ಯಕ್ರಮದಾಗಿತ್ತು. ತಾಯ್ತನಕ್ಕೆ ಬೆಲೆ ನೀಡುವ ಸಲುವಾಗಿ ಆಯೋಜನೆ ಮಾಡಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಗರ್ಭಿಣಿಯರು ಭಾಗವಹಿಸಿದ್ದರು.
ಎಸ್‍ಪಿ ರೋಹಿಣಿ ಕಠೋಚ್ ರಂತ ಅಧಿಕಾರಿಯಿಂದ ಮಡಿಲು ತುಂಬಿಸಿಕೊಂಡದಕ್ಕೆ ಗರ್ಭಿಣಿಯರು ಕೂಡ ಫುಲ್ ಖುಷಿಯಾಗಿದ್ದರು. ಅಲ್ಲದೆ ತಮ್ಮ ಮಕ್ಕಳು ಕೂಡ ಇಂತಹ ದಕ್ಷ ಅಧಿಕಾರಿಗಳಾಗಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ.
ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ಗರ್ಭಿಣಿಯರಿಗೆ ಮಡಿಲು ತುಂಬುವ ಮೂಲಕ ಸರಳವಾಗಿ ಜನರ ಜೊತೆಗೆ ಬೆರೆತ ಎಸ್‍ಪಿ ರೋಹಿಣಿ ಕಠೋಚ್ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv