-ಭೀಕರ ಭೂಕಂಪಕ್ಕೆ ತುತ್ತಾದ ಪ್ರದೇಶದಂತೆ ಕಾಣ್ತಿದೆ ಜೋಡುಪಾಲ
ಮಂಗಳೂರು: ಆಗಸ್ಟ್ 17, 18ರಂದು ಮಡಿಕೇರಿಯ ಜೋಡುಪಾಲ, ಮೊಣ್ಣಂಗೇರಿ ಬಳಿ ಸಂಭವಿಸಿದ ಜಲಸ್ಫೋಟ ಕೊಡಗು ಜಿಲ್ಲೆ ಕಂಡು ಕೇಳರಿಯದ ದುರಂತಕ್ಕೆ ಕಾರಣವಾಗಿತ್ತು. ಹಸಿರ ಸಿರಿಯಾಗಿ ಗಗನ ಚುಂಬಿಸುತ್ತಿದ್ದ ಬೆಟ್ಟಗಳು ಛಿದ್ರಗೊಂಡು ತಪ್ಪಲು ಭಾಗದಲ್ಲಿ ಕಟ್ಟಿಕೊಂಡಿದ್ದ ಮನೆ, ರೆಸಾರ್ಟ್ ಕಟ್ಟಡಗಳು ಹೇಳ ಹೆಸರಿಲ್ಲದಂತೆ ಭೂಸಮಾಧಿಯಾಗಿದ್ದವು.
10-15 ಮೀಟರ್ ಎತ್ತರಕ್ಕೆ ಹರಿದ ನೀರಿನ ರಭಸಕ್ಕೆ ದೊಡ್ಡ ದೊಡ್ಡ ಮರಗಳು ತರಗೆಲೆಗಳಂತೆ ಕೊಚ್ಚಿ ಹೋಗಿದ್ದವು. ಹೆದ್ದಾರಿಗಳು, ಸ್ಥಳೀಯರು ಮಾಡಿಕೊಂಡಿದ್ದ ಕೃಷಿ ಬೆಳೆಗಳು ನಿರ್ನಾಮವಾಗಿದ್ದವು. ಅಂದು ದುರಂತ ಎದುರಾಗುವ ಮೊದಲೇ ಅಲ್ಲಿನ ಜನ ಸ್ಥಳ ಬಿಟ್ಟು ತೆರಳಿದ್ದರಿಂದ ಜೀವ ಉಳಿಸಿಕೊಂಡಿದ್ದರು. ಮಡಿಕೇರಿಯಿಂದ ಆರು ಕಿಮೀ ದೂರದ 2ನೇ ಮೊಣ್ಣಂಗೇರಿಯ ಹೆದ್ದಾರಿ ಬದಿಯಲ್ಲಿ ದೊಡ್ಡ ರೆಸಾರ್ಟ್ ಇತ್ತು. ಆದ್ರೆ ಆವತ್ತಿನ ಪ್ರವಾಹಕ್ಕೆ ತುತ್ತಾದ ರೆಸಾರ್ಟ್ ಕಟ್ಟಡ ಕುರುಹೇ ಇಲ್ಲದಂತೆ ನಾಶವಾಗಿ ಹೋಗಿದೆ.
ಭೀಕರ ಭೂಕಂಪಕ್ಕೆ ತುತ್ತಾದ ಪ್ರದೇಶ ಹೇಗಿರುತ್ತೋ ಹಾಗಿದೆ ಅಲ್ಲಿನ ಸದ್ಯದ ಸ್ಥಿತಿ. ಒಂದು ಭಾಗದಿಂದ ಬೆಟ್ಟ ಗುಡ್ಡ ಕುಸಿದು ಹೋಗಿದ್ದರೆ, ಅಲ್ಲಿಯೇ ಕೆಳಭಾಗದಲ್ಲಿದ್ದ ರೆಸಾರ್ಟ್ ಕಟ್ಟಡದ ತಳಪಾಯವೇ ಇಲ್ಲದಂತೆ ನಾಪತ್ತೆಯಾಗಿದೆ. ಒಂದುಕಡೆ ಬಿದ್ದುಕೊಂಡಿರುವ ಟಾಯ್ಲೆಟ್, ಕೊಠಡಿಗಳ ಗೋಡೆಗಳು, ಅಲಂಕಾರಿಕ ಕಟ್ಟಡದ ಕಂಬಗಳು ಹಂಪಿಯ ಸ್ಥಿತಿಯನ್ನು ನೆನಪಿಸುವಂತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv