ಅಂಬಿಡೆಂಟ್ ಹಣ ವಂಚನೆ ಪ್ರಕರಣಕ್ಕೆ ರೆಡ್ಡಿಗೂ ಏನು ಸಂಬಂಧ? ಡಿಲೀಂಗ್ ಹೇಗಾಯ್ತು? 57 ಕೆಜಿ ಚಿನ್ನ ತಲುಪಿದ್ದು ಹೇಗೆ?

Public TV
4 Min Read
Janardhan Reddy 2

ಬೆಂಗಳೂರು: ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೆಟ್ ಲಿಮಿಟೆಡ್ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಗೆ 57 ಕೆಜಿ ಚಿನ್ನ ರವಾನೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಂಬಿಡೆಂಟ್ ಕಂಪನಿ ವಂಚನೆ ಎಸಗಿದ್ದು ಹೇಗೆ? ಈ ಪ್ರಕರಣದಲ್ಲಿ ರೆಡ್ಡಿಗೆ ಏನು ಸಂಬಂಧ ಇತ್ಯಾದಿ ಪ್ರಶ್ನೆಗಳಿಗೆ ಬೆಂಗಳೂರು ಪೊಲೀಸರು ಮಾಧ್ಯಮ ಹೇಳಿಕೆಯನ್ನು ಬಿಡುಗಡೆಗೊಳಿಸಿ ಮಾಹಿತಿ ನೀಡಿದ್ದಾರೆ. ಇದನ್ನು ಓದಿ: ಹೊಡೆದು ಜನಾರ್ದನ ರೆಡ್ಡಿ ಹೆಸರು ಹಾಕಿಸಿದ್ದಾರೆ- ಡೀಲ್ ಪ್ರಕರಣಕ್ಕೆ ಸ್ಫೋಟಕ ತಿರುವು

ಏನಿದು ಅಂಬಿಡೆಂಟ್ ಕಂಪನಿ?
ಡಿ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕನಕನಗರದ ಮುಖ್ಯರಸ್ತೆಯಲ್ಲಿ ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೆಟ್ ಲಿಮಿಟೆಡ್ ಕಂಪನಿಯನ್ನು ಸೈಯದ್ ಅಹಮದ್ ಎಂಬವನು ನಡೆಸುತ್ತಿದ್ದ. ನಿಮ್ಮ ಹೂಡಿಕೆಗೆ 4 ತಿಂಗಳ ಅವಧಿಗೆ ಶೇ.40ರಿಂದ ಶೇ.50ರಷ್ಟು ಬಡ್ಡಿ ನೀಡುತ್ತೇವೆ ಎಂದು ಹೇಳಿ ಸೈಯದ್ ಸಾರ್ವಜನಿಕರನ್ನು ನಂಬಿಸಿದ್ದ. ಸೈಯದ್ ಮಾತಿಗೆ ಮರಳಾಗಿ ಸುಮಾರು 15 ಸಾವಿರಕ್ಕೂ ಜನರು ಈ ಕಂಪನಿಯಲ್ಲಿ ಹಣವನ್ನು ಹೂಡಿಕೆ ಮಾಡಿದ್ದರು. ಅಂದಾಜು ಸುಮಾರು 600 ಕೋಟಿ ರೂ. ಹಣವನ್ನು ಸಂಗ್ರಹಿಸಿದ್ದ ಸೈಯದ್ ಮರಳಿ ಗ್ರಾಹಕರಿಗೆ ನೀಡಲು ಹಿಂದೇಟು ಹಾಕುತ್ತಿದ್ದ.

Janardhan Reddy ALI KHAN

ದೂರು ದಾಖಲು:
ಸೈಯದ್ ಸಾವಿರಾರು ಜನರಿಗೆ ವಂಚಿಸಿದ್ದು, ವಂಚನೆಗೆ ಒಳಗಾದವರ ಪೈಕಿ ಪೈಕಿ ಸರ್ಫರಾಜ್ ಆಲಂ ತಬರೇಜ್ ಎಂಬವರು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಅಂಬಿಡೆಂಟ್ ಕಂಪನಿ ವಿರುದ್ಧ 2018ರ ಮೇ ತಿಂಗಳಿನಲ್ಲಿ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಹಣವನ್ನು ಮರಳಿಸುವಂತೆ ಸೂಚಿಸಿದ್ದರು. ಹಲವು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ವಂಚನೆ ಸಂಪೂರ್ಣ ತನಿಖೆಗಾಗಿ ಎಲ್ಲ ಪ್ರಕರಣಗಳನ್ನು ನಗರ ಪೊಲೀಸ್ ಆಯುಕ್ತರು ಸಿಸಿಬಿ ವರ್ಗಾಯಿಸಿದ್ದರು. ತನಿಖೆ ಚುರುಕುಗೊಳಿಸಿದ ಸಿಸಿಬಿ ಪೊಲೀಸರು ಸೈಯದ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಇದನ್ನು ಓದಿ: ನನಗೆ ಯಾವುದೇ ಮಾಹಿತಿ ಇಲ್ಲ: ರೆಡ್ಡಿ ಡೀಲ್ ಪ್ರಶ್ನೆಗೆ ಶ್ರೀರಾಮುಲು ಉತ್ತರ

ಇಡಿಯಿಂದ ದಾಳಿ
ಸಾರ್ವಜನಿಕರಿಂದ ಸಂಗ್ರಹಿಸಿದ ಕೋಟ್ಯಂತರ ರೂ. ಹಣವನ್ನು ಸೈಯದ್, ಹಲವಾರು ಜನರ ಬಳಿ ಹೂಡಿಕೆ ಮಾಡಿದ್ದಾನೆ ಎನ್ನುವ ಸ್ಫೋಟಕ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು. ಅಕ್ರಮ ಹಣಕಾಸಿನ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾನೆ ಎನ್ನುವ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಸೈಯದ್ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ನಡೆಸಿತ್ತು. ಬಳಿಕ ಆತನ ಬ್ಯಾಂಕ್, ಹಣಕಾಸಿನ ವ್ಯವಹಾರಗಳನ್ನು ಸ್ಥಗಿತಗೊಳಿಸಲಾಯಿತು. ಈತನ ಬ್ಯಾಂಕಿಂಗ್ ವ್ಯವಹಾರಗಳ ಮಾಹಿತಿಯನ್ನು ಕಲೆ ಹಾಕಿದಾಗ ಬೆಚ್ಚಿ ಬೀಳಿಸುವ ಅಂಶ ಪತ್ತೆಯಾಯಿತು.

AMBIDENT office 1

ರೆಡ್ಡಿ ಎಂಟ್ರಿ ಹೇಗಾಯ್ತು?
ಇಡಿಯಲ್ಲಿ ಕೇಸ್ ದಾಖಲಾದ ಬಳಿಕ ಮುಂದೆ ಕಷ್ಟವಿದೆ ಎನ್ನುವುದನ್ನು ಅರಿತ ಸೈಯದ್ ಜನಾರ್ದನ ರೆಡ್ಡಿಯ ಸಹಾಯ ಕೋರಿದ್ದ. ಹೀಗಾಗಿ ಜನಾರ್ದನ ರೆಡ್ಡಿ, ರೆಡ್ಡಿ ಆಪ್ತ ಅಲಿಖಾನ್ ಮತ್ತು ಸೈಯದ್ ಒಂದು ಕಡೆ ಸಭೆ ನಡೆಸಿದ್ದರು. ಸಭೆಯಲ್ಲಿ ಈ ಪ್ರಕರಣದಲ್ಲಿ ಪಾರಾಗಲು ರೆಡ್ಡಿ 20 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ. ಒಪ್ಪಂದದ ಪ್ರಕಾರ 20 ಕೋಟಿ ರೂ.ವನ್ನು ಚಿನ್ನದ ರೂಪದಲ್ಲಿ ನೀಡುವಂತೆ ಜನಾರ್ದನ ರೆಡ್ಡಿ ಷರತ್ತು ವಿಧಿಸಿದ್ದರು.  ಇದನ್ನು ಓದಿ: ಜನಾರ್ದನ ರೆಡ್ಡಿ ರಾತ್ರೋರಾತ್ರಿ ಮೊಳಕಾಲ್ಮೂರಿನಿಂದ ಪರಾರಿಯಾಗಿದ್ದು ಹೇಗೆ? ಈಗ ಎಲ್ಲಿದ್ದಾರೆ?

ಚಿನ್ನ ರೆಡ್ಡಿಗೆ ತಲುಪಿದ್ದು ಹೇಗೆ?
ಚಿನ್ನ ತಲುಪಿಸುವುದು ಹೇಗೆ ಎಂದು ಆಲೋಚಿಸುತ್ತಿದ್ದಾಗ ಸೈಯದ್, ಅಲಿಖಾನ್‍ಗೆ ಪರಿಚಯವಿರುವ ಬಳ್ಳಾರಿಯ ರಾಜಮಹಲ್ ಫ್ಯಾನ್ಸಿ ಜುವೆಲರ್ಸ್ ನ ರಮೇಶ್ ಬಳಿ ಚಿನ್ನ ಖರೀದಿಸುವುದು ಉತ್ತಮ ಎನ್ನುವ ನಿರ್ಧಾರಕ್ಕೆ ಬಂದಿದ್ದಾನೆ. ಸೈಯದ್ ಬೇಡಿಕೆ ಪ್ರಮಾಣದ ಚಿನ್ನವನ್ನು ನೀಡಲು ರಮೇಶ್ ಒಪ್ಪಿದ್ದ. ಆದರೆ ಆತನಲ್ಲಿ ಇಷ್ಟೊಂದು ಪ್ರಮಾಣದ ಚಿನ್ನ ದಾಸ್ತಾನು ಇರಲಿಲ್ಲ. ಹೀಗಾಗಿ ಸೈಯದ್ ಬೇಡಿಕೆಯನ್ನು ಈಡೇರಿಸಲು ರಮೇಶ್ ಬೆಂಗಳೂರಿನ ಅಂಬಿಕಾ ಸೇಲ್ಸ್ ಕಾರ್ಪೋರೇಷನ್ ರಮೇಶ್ ಕೊಠಾರಿ ಬಳಿ 18 ಕೋಟಿ ರೂ. ಮೊತ್ತದ 57 ಕೆ.ಜಿ ಚಿನ್ನವನ್ನು ಖರೀದಿ ಮಾಡಿದ್ದ. ಈ ಚಿನ್ನ ಬಳ್ಳಾರಿಯ ರಮೇಶ್ ಗೆ ತಲುಪಿ, ನಂತರ ಸೈಯದ್ ಕೊನೆಗೆ ಜನಾರ್ದನ ರೆಡ್ಡಿಗೆ ತಲುಪಿದೆ.

324933

ಸಿಸಿಬಿ ತಂಡಕ್ಕೆ ಸಿಕ್ಕ ಮಾಹಿತಿ ಆಧಾರದ ಮೇಲೆ ಬಳ್ಳಾರಿಯ ರಾಜಮಹಲ್ ಪ್ಯಾನ್ಸಿ ಜುವೆಲರ್ಸ್ ನ ರಮೇಶ್ ಕೊಠಾರಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿ ಹಲವು ಮಹತ್ವ ಪೂರ್ಣ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ತಂಡದಲ್ಲಿ ಯಾರಿದ್ದಾರೆ?
ಈ ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಹಾಗೂ ಅಲಿಖಾನ್ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಇದಕ್ಕಾಗಿ ಸಿಸಿಬಿ ಘಟಕದ ಎಸಿಪಿ ಪಿ.ಟಿ.ಸುಬ್ರಮಣ್ಯ, ಮರಿಯಪ್ಪ, ಮೋಹನ್ ಕುಮಾರ್ ಮಂಜುನಾಥ್ ಚೌಧರಿ ಅವರ ನೇತೃತ್ವದ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ನಿರ್ದೇಶನದ ಮೇರೆಗೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಮತ್ತು ಸಿಸಿಬಿ ಉಪ ಪೊಲೀಸ್ ಆಯುಕ್ತ ಗಿರೀಶ್.ಎಸ್ ಮಾರ್ಗದರ್ಶನದಲ್ಲಿ ತಂಡವು ಕೆಲಸ ಮಾಡುತ್ತಿದೆ.

vlcsnap 2018 11 07 13h54m37s247

ಯಾವುದಿದು ಅಂಬಿಡೆಂಟ್ ಕಂಪನಿ?
ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ದುಬೈ ಮೂಲದ ಉದ್ಯಮಿಗಳು ಸ್ಥಾಪಿಸಿದ್ದಾರೆ. ಈ ಕಂಪನಿಯ ಕಚೇರಿ ಬೆಂಗಳೂರಿನ ಕನಕನಗರದ ಮುಖ್ಯರಸ್ತೆಯಲ್ಲಿದೆ. ಈ ಕಂಪನಿಯನ್ನು ನಡೆಸುತ್ತಿದ್ದ, ಸೈಯದ್ ಅಹಮದ್, ನಿಮ್ಮ ಹಣವನ್ನ ಒಂದು ವರ್ಷದಲ್ಲಿ ದ್ವಿಗುಣ ಮಾಡಿಕೊಡುತ್ತೇವೆ ಎಂದು ಜನರಿಂದ ಹಣ ಪಡೆಯುತ್ತಿದ್ದ. ಗ್ರಾಹಕರಿಂದ ಕನಿಷ್ಠ ಹೂಡಿಕೆ ಎಂದು ಹೇಳಿ ಒಂದು ಲಕ್ಷ ರೂ. ಪಡೆದು, ಪ್ರತಿ ಮೂರು ತಿಂಗಳಿಗೊಮ್ಮೆ 40 ಸಾವಿರ ರೂ.ದಂತೆ ವರ್ಷಕ್ಕೆ 1.60 ಸಾವಿರ ವಾಪಸ್ಸು ಕೊಡುವುದಾಗಿ ಗ್ರಾಹಕರನ್ನು ನಂಬಿಸಿದ್ದ. ಹೀಗಾಗಿ ಇಲ್ಲಿ ಸಾವಿರಾರು ಜನರು ಹೂಡಿಕೆ ಮಾಡಿದ್ದರು. ಇದೇ ದೋಖಾ ಕಂಪೆನಿಯಲ್ಲಿ ಬೇನಾಮಿ ಹೆಸರಲ್ಲಿ ರೆಡ್ಡಿ ಆಪ್ತ ಅಲಿಖಾನ್ ಹಣ  ಹೂಡಿಕೆ ಮಾಡಿದ್ದ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Gali Janardhan Reddy Ramesh

Share This Article
Leave a Comment

Leave a Reply

Your email address will not be published. Required fields are marked *