ಚಿಕ್ಕಬಳ್ಳಾಪುರ: ಬಳ್ಳಾರಿ ಲೋಕಸಭಾ ಉಪಚುನಾವಣಾ ಅಭ್ಯರ್ಥಿ ವಿ ಎಸ್ ಉಗ್ರಪ್ಪ ನವರ ಮನೆಯಲ್ಲಿನ ಗೃಹಬಳಕೆ ವಸ್ತುಗಳನ್ನ ಮುಟ್ಟುಗೋಲು ಹಾಕುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
ಮೋಟಾರು ಕಾಯ್ದೆ ಅಡಿ ಬಾಲಾಜಿ ಎಂಬವರಿಗೆ ನೀಡಬೇಕಾಗಿದ್ದ ಅಪಘಾತ ಪರಿಹಾರದ ಹಣವನ್ನು ನೀಡದೇ, ಸ್ಥಳೀಯ ನ್ಯಾಯಾಲಯದ ಆದೇಶವನ್ನು ಉಗ್ರಪ್ಪ ಉಲ್ಲಂಘನೆ ಮಾಡಿದ್ದರು. ಇಂದು ಇದರ ಮರು ವಿಚಾರಣೆ ನಡೆಸಿದ ದೊಡ್ಡಬಳ್ಳಾಪುರ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ, ವಿ.ಎಸ್.ಉಗ್ರಪ್ಪ ಅವರಿಗೆ ಸೇರಿದ ಚರಾಸ್ತಿಯನ್ನು ಮುಟ್ಟುಗೋಲು ಹಾಕಲು ಆದೇಶ ನೀಡಿದೆ.
ಈ ಪ್ರಕರಣದಲ್ಲಿ ಪರಿಹಾರ ಹಣ ಪಾವತಿ ಮಾಡುವಂತೆ ಆದೇಶ ನೀಡಿದ್ದರೂ, ಉಗ್ರಪ್ಪ ಯಾವುದೇ ಪರಿಹಾರ ನೀಡಿದ ಹಿನ್ನೆಲೆಯಲ್ಲಿ ಕೋರ್ಟ್ ಇಂದು ಚರಾಸ್ತಿ ಮುಟ್ಟುಗೋಲಿಗೆ ಆದೇಶ ನೀಡಿದೆ. ಇದನ್ನು ಓದಿ: ನ್ಯಾಯ ಕೇಳಲು ಬಂದಿದ್ದ ಮಹಿಳೆಗೆ ಭ್ರಷ್ಟಾಚಾರದಿಂದ ವ್ಯವಸ್ಥೆ ಬೆತ್ತಲೆಯಾಗಿದೆ ನನ್ನಿಂದ ಆಗಲ್ಲ ಅಂದಿದ್ರು ಉಗ್ರಪ್ಪ!
ಏನಿದು ಪ್ರಕರಣ?
2010 ರ ಆಗಸ್ಟ್ 8 ರಂದು ಬೆಂಗಳೂರಿನ ಚಿಕ್ಕಸಂದ್ರ ನಿವಾಸಿ ವ್ಯಾಪಾರಿ ಬಾಲಾಜಿ ಎಂಬವರು ತನ್ನ ಬಜಾಜ್ ಚೇತಕ್ ಸ್ಕೂಟರ್ ನಲ್ಲಿ ಯಲಹಂಕ- ದೊಡ್ಡಬಳ್ಳಾಪುರ ರಸ್ತೆಯಲ್ಲಿ ಪ್ರಯಾಣಿಸುತ್ತಿರುವಾಗ ಹಿಂಬದಿಯಿಂದ ಬಂದ ಉಗ್ರಪ್ಪ ಮಾಲೀಕತ್ವದ ಕೆಎ 02 ಜೆಡ್ 4499 ನಂಬರಿನ ಟೊಯೋಟಾ ಕ್ವಾಲೀಸ್ ವಾಹನ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಸವಾರ ಬಾಲಾಜಿ ಗಂಭೀರವಾಗಿ ಗಾಯಗೊಂಡು ಸ್ಕೂಟರ್ ಸಂಪೂರ್ಣ ಜಖಂಗೊಂಡಿತ್ತು.
ಈ ಪ್ರಕರಣ ಸಂಬಂಧ 2012 ರಲ್ಲಿ ಸ್ಕೂಟರ್ ಸವಾರ ಬಾಲಾಜಿ ವಿಶೇಷ ದಾವೆ ಹೂಡಿ ಪರಿಹಾರ ನೀಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೀಗಾಗಿ ಸ್ಕೂಟರ್ ಸವಾರ ಬಾಲಾಜಿಗೆ, 2017ರ ಅಕ್ಟೋಬರ್ 31 ರಂದು ಮೋಟಾರು ವಾಹನ ಕಾಯ್ದೆಯಡಿ 67,500 ರೂ. ಪರಿಹಾರ ಧನ ವಿತರಣೆಗೆ ಮಾಡುವಂತೆ ನ್ಯಾಯಾಲಯ ಆದೇಶ ಮಾಡಿತ್ತು. ಮೊದಲೇ ಕೋರ್ಟ್ ಗೆ ಹಾಜರಾಗದ ಉಗ್ರಪ್ಪ, ದಂಡವನ್ನ ಸಹ ಪಾವತಿಸದೇ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದರು. ಕೋರ್ಟ್ ಆದೇಶ ವರ್ಷ ಕಳೆದರೂ, ಉಗ್ರಪ್ಪನವರು ಯಾವುದೇ ಪರಿಹಾರದ ಹಣವನ್ನು ನೀಡಿರಲಿಲ್ಲ. ಹೀಗಾಗಿ ಬಾಲಾಜಿ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು.
ಶುಕ್ರವಾರ ಬಾಲಾಜಿಯವರ ಕೇಸ್ ಸಂಖ್ಯೆ 10048/2018 ವಿಚಾರಣೆಗೆ ಬಂದಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ನ್ಯಾಯಾಲಯ ನ್ಯಾ.ಶುಕ್ಲಾಷ್ಕಪಾಲನ್ 67,500 ರೂಪಾಯಿ ಪರಿಹಾರ ಹಣಕ್ಕೆ ಬಡ್ಡಿ ಸಹಿತ 94,925 ರೂಪಾಯಿ ಸೇರಿಸಿ ಉಗ್ರಪ್ಪನವರಿಗೆ ಸೇರಿದ ಮನೆಯಲ್ಲಿನ ಚರಾಸ್ತಿಯನ್ನು ಮುಟ್ಟುಗೋಲು ಮಾಡುವಂತೆ ಆದೇಶ ನೀಡಿದ್ದಾರೆ. ಇದೇ ತಿಂಗಳ 12, 13ರೊಳಗೆ ಮುಟ್ಟುಗೋಲು ಹಾಕುವಂತೆ ಸೂಚಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv