ಗಮನಿಸಿ, 2020 ರಿಂದ ಬಿಎಸ್4 ವಾಹನಗಳ ಮಾರಾಟ ರದ್ದು

Public TV
5 Min Read
BS4

ನವದೆಹಲಿ: 2020ರ ಏಪ್ರಿಲ್ 1 ರಿಂದ ಬಿಎಸ್ (ಭಾರತ್ ಸ್ಟೇಜ್)4 ಮಾದರಿಯ ಯಾವುದೇ ವಾಹನಗಳ ಮಾರಾಟ ಮಾಡುವಂತಿಲ್ಲವೆಂದು ಸುಪ್ರೀಂ ಕೋರ್ಟ್ ಖಡಕ್ ಸೂಚನೆ ನೀಡಿದೆ.

ಬಿಎಸ್4 ಮಾದರಿಯ ವಾಹನಗಳ ಮಾರಾಟಕ್ಕೆ ಹೆಚ್ಚುವರಿ ಅವಕಾಶ ನೀಡುವಂತೆ ವಾಹನ ತಯಾರಿಕಾ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಸುಪ್ರೀಂ ಕೋರ್ಟಿನ ತ್ರಿ-ಸದನ ಪೀಠ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ತ್ರಿಸದಸ್ಯ ಪೀಠ ವಾಹನ ತಯಾರಿಕಾ ಕಂಪೆನಿಗಳಿಗೆ ಕಟ್ಟು-ನಿಟ್ಟಿನ ಆದೇಶ ನೀಡಿದ್ದು, ಯಾವುದೇ ಕಾರಣಕ್ಕೂ 2020 ಏಪ್ರಿಲ್ 1ರ ನಂತರ ಬಿಎಸ್4 ಮಾದರಿಯ ವಾಹನಗಳನ್ನು ಮಾರಾಟ ಮಾಡದಂತೆ ಆದೇಶ ನೀಡಿದೆ.

PETROL CARS

ಏನಿದು ಬಿಎಸ್4?
ಭಾರತ್ ಸ್ಟೇಜ್(ಬಿಎಸ್) ಅಂದ್ರೆ ವಾಹನಗಳ ಅನಿಲ ಹೊರಸೂಸುವಿಕೆ/ ಮಾಲಿನ್ಯ ಪ್ರಮಾಣದ ನಿಯಂತ್ರಣಾ ಮಾನದಂಡ. ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಪರಿಸರ ಇಲಾಖೆ, ಅರಣ್ಯ ಹಾಗೂ ಹವಾಮಾನ ಇಲಾಖೆಯ ಅಡಿಯಲ್ಲಿ ಈ ಮಾನದಂಡವನ್ನ ನಿಗದಿಪಡಿಸುತ್ತದೆ. ಹಾಗೆ ಕಾಲಕಾಲಕ್ಕೆ ಇದನ್ನು ಮಾರ್ಪಾಡು ಮಾಡುತ್ತದೆ. ವಾಹನಗಳ ಮಾಲಿನ್ಯ ಪ್ರಮಾಣವನ್ನ ನಿಯಂತ್ರಿಸಲು ಕೇಂದ್ರ ಸರ್ಕಾರ ಈ ಮಾನದಂಡವನ್ನ ಹಾಕಿತ್ತು. ಹೀಗಾಗಿ 2017ರ ಏಪ್ರಿಲ್ 1ರಿಂದ ಕೇಂದ್ರ ಸರ್ಕಾರ ಬಿಎಸ್4 ಮಾದರಿಯ ವಾಹನಗಳ ಮಾರಾಟಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿತ್ತು.

ಬಿಎಸ್4 ನಂತರ 2020 ಏಪ್ರಿಲ್ 1ರಲ್ಲಿ ಇದರ ಮುಂದಿನ ಅವತರಣೆ ಬಿಎಸ್5 ಬದಲಾಗಿ ಬಿಎಸ್6 ವಾಹನಗಳನ್ನು ಮಾರಾಟ ಮಾಡುವಂತೆ ಕೇಂದ್ರ ಸರ್ಕಾರ ವಾಹನ ತಯಾರಿಕಾ ಕಂಪೆನಿಗಳಿಗೆ ಸೂಚನೆ ನೀಡಿತ್ತು. ಹೀಗಾಗಿ ಕಂಪೆನಿಗಳು ಬಿಎಸ್4 ಗುಣಮಟ್ಟದ ವಾಹನಗಳ ಮಾರಾಟಕ್ಕೆ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಕೇಳಿದ್ದವು. ಸರ್ಕಾರ ಹಾಗೂ ವಾಹನ ತಯಾರಿಕಾ ಸಂಸ್ಥೆಗಳ ಕಿತ್ತಾಟ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದರ ವಿಚಾರಣೆ ನಡೆಸಿದ್ದ ಕೋರ್ಟ್ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಕಟ್ಟುನಿಟ್ಟಿನ ಆದೇಶ ಮಾಡಿದೆ.

PETROL CUT

ಏನಿದು ಬಿಎಸ್6?
ಬಿಎಸ್4 ವಾಹನಗಳಿಗಿಂತ ಅತಿ ಕಡಿಮೆ ಪ್ರಮಾಣದ ಹೊಗೆ ಉಗುಳುವ ವಾಹನಗಳೇ ಬಿಎಸ್6 ಮಾದರಿಯ ವಾಹನಗಳು. ಸದ್ಯ ಭಾರತದಲ್ಲಿ ಬಿಎಸ್4 ಮಾದರಿಯ ವಾಹನಗಳು ಜಾರಿಯಲ್ಲಿದ್ದು, ಈ ಬಿಎಸ್6 ವಾಹನಗಳ ಜಾರಿಯಿಂದ ಭಾರತ ಅಮೆರಿಕ, ಐರೋಪ್ಯ ದೇಶಗಳು ಹಾಗೂ ವಿಶ್ವದ ಹಲವೆಡೆ ಜಾರಿಯಲ್ಲಿರುವ ಅತ್ಯಾಧುನಿಕ ವಾಹನ ಮಾರುಕಟ್ಟೆಯ ಗುಣಮಟ್ಟಕ್ಕೆ ಸರಿಸಮಾನಾದ ವಾಹನಗಳು ನಮ್ಮ ದೇಶದಲ್ಲಿಯೂ ಸಂಚರಿಸುತ್ತವೆ. ಬಿಎಸ್6 ವಾಹನಗಳ ಪೆಟ್ರೋಲ್ ಮಾದರಿಯಲ್ಲಿ ಶೇ.25 ರಷ್ಟು ಇಳಿಕೆಯಾದರೆ, ಡೀಸೆಲ್ ಮಾದರಿಯಲ್ಲಿ ಶೇ.68 ರಷ್ಟು ಹೊಗೆ ಉಗುಳುವ ಪ್ರಮಾಣ ಕಡಿಮೆಯಾಗುತ್ತದೆ.

2019ರಲ್ಲಿ ಲಭ್ಯ:
ಗುರ್ಗಾಂವ್, ನೊಯ್ಡಾ, ಘಜಿಯಾಬಾದ್ ಹಾಗೂ ಫರೀದಾಬಾದ್ ಸೇರಿದಂತೆ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ 2019ರ ಏಪ್ರಿಲ್ 1ರ ವೇಳೆಗೆ ಬಿಎಸ್6 ಇಂಧನ ಲಭ್ಯವಿರಲಿದೆ. 2020ರ ಏಪ್ರಿಲ್ 1ರಿಂದ ದೇಶದಾದ್ಯಂತ ಬಿಎಸ್6 ವಾಹನಗಳ ಜಾರಿಗೂ ಮುನ್ನವೇ ಬಿಎಸ್6 ಇಂಧನ ಬರಲಿದೆ.

petrol diesel

ಭಾರತದಲ್ಲಿ ಯಾವಾಗ ಜಾರಿಗೊಳಿಸಲಾಯ್ತು?
ಯುರೋಪಿಯನ್ ಮಾನದಂಡಗಳಿಗೆ ಅನುಗುಣವಾಗಿ ಭಾರತದಲ್ಲಿ ಮೊದಲ ಬಾರಿಗೆ 2000 ಇಸವಿಯಲ್ಲಿ ಬಿಎಸ್ ಮಾನದಂಡ ಜಾರಿಗೊಳಿಸಲಾಯ್ತು. 2005ರಲ್ಲಿ ಬಿಎಸ್ 2 ಮಾನದಂಡ ಜಾರಿಗೆ ಬಂತು. 2010ರಲ್ಲಿ ಬಿಎಸ್ 3 ಮಾನದಂಡವನ್ನು ಜಾರಿಗೊಳಿಸಲಾಯ್ತು. 2016ರ ಏಪ್ರಿಲ್‍ನಲ್ಲಿ ಬಿಎಸ್ 4 ಮಾನದಂಡವನ್ನ ಬೆಂಗಳೂರು ಸೇರಿದಂತೆ 13 ಪ್ರಮುಖ ನಗರಗಳಲ್ಲಿ ಅಸ್ತಿತ್ವಕ್ಕೆ ತರಲಾಯ್ತು. 2017ರ ಏಪ್ರಿಲ್ 1 ರಿಂದ ದೇಶದಲ್ಲಿ ಎಲ್ಲಾ ವಾಹನಗಳು ಬಿಎಸ್ 4 ಮಾನದಂಡ ಹೊಂದಿರುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.

ಬಿಎಸ್-2 ಗಿಂತಲೂ ಮೊದಲು ಯಾವ ನಿಯಮ ಇತ್ತು?
ಭಾರತದಲ್ಲಿ ಮೊದಲ ಬಾರಿಗೆ 1991ರಲ್ಲಿ ಪೆಟ್ರೋಲ್ ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಮಾನದಂಡವನ್ನು ಜಾರಿಗೊಳಿಸಲಾಯ್ತು. ನಂತರ 1992ರಲ್ಲಿ ಡೀಸೆಲ್ ವಾಹನಗಳಗೆ ಮಾನದಂಡ ಜಾರಿಗೆ ಬಂತು. ಇದರ ಬೆನ್ನಲ್ಲೇ ಪೆಟ್ರೋಲ್ ವಾಹನಗಳಲ್ಲಿ ಕ್ಯಾಟಲಿಸ್ಟಿಕ್ ಕನ್ವರ್ಟರ್ ಕಡ್ಡಾಯಗೊಳಿಲಾಯ್ತು ಹಾಗೂ ಲೆಡ್ ರಹಿತ ಪೆಟ್ರೋಲ್ ಮಾರುಕಟ್ಟೆಗೆ ಪರಿಚಯಿಸಲಾಯ್ತು. 1999ರ ಏಪ್ರಿಲ್‍ನಲ್ಲಿ ಭಾರತದಲ್ಲಿ ಎಲ್ಲಾ ವಾಹನಗಳು ಯುರೋ 1 ಅಥವಾ ಭಾರತ 2000 ಮಾನದಂಡವನ್ನು ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತು. ಆದ್ರೆ ಈ ಬದಲಾವಣೆ ಮಾಡಿಕೊಳ್ಳಲು ಕಾರು ತಯಾರಕರು ಸಿದ್ಧರಿರಲಿಲ್ಲ. ಹೀಗಾಗಿ ಮುಂದಿನ ತೀರ್ಪಿನಲ್ಲಿ ಯೂರೋ 2 ಅನುಷ್ಠಾನ ದಿನಾಂಕ ಜಾರಿಯಾಗಲಿಲ್ಲ.

PETROL PROTEST 2

2002ರಲ್ಲಿ ಭಾರತ ಸರ್ಕಾರ ಮಾಶೆಲ್ಕರ್ ಸಮಿತಿಯ ವರದಿಯನ್ನು ಸ್ವೀಕರಿಸಿತು. ಈ ವರದಿಯಲ್ಲಿ ಯುರೋ ಆಧರಿತ ಮಾಲಿನ್ಯ ನಿಯಂತ್ರಣ ಮಾನದಂಡವನ್ನು ಭಾರತದಲ್ಲೂ ಜಾರಿಗೊಳಿಸುವಂತೆ ಶಿಫಾರಸು ಮಾಡಿತ್ತು. ಈ ಮಾನದಂಡವನ್ನು ಮೊದಲಿಗೆ ಪ್ರಮುಖ ನಗರಗಳಲ್ಲಿ ಜಾರಿಗೆ ತಂದು ನಂತರ ಕೆಲವು ವರ್ಷಗಳ ಬಳಿಕ ದೇಶದ ಇತರೆ ಭಾಗಗಳಿಗೆ ವಿಸ್ತರಿಸುವ ಮೂಲಕ ಹಂತಹಂತವಾಗಿ ಜಾರಿಗೊಳಿಸಬೇಕೆಂದು ವರದಿಯಲ್ಲಿ ಹೇಳಲಾಗಿತ್ತು. ಈ ವರದಿಯ ಆಧಾರದ ಮೇಲೆ ರಾಷ್ಟ್ರೀಯ ವಾಹನ ಇಂಧನ ನೀತಿಯನ್ನು 2003ರಲ್ಲಿ ಅಧಿಕೃತವಾಗಿ ಘೋಷಿಸಲಾಯ್ತು. ನಂತರ 2010ರ ಅಕ್ಟೋಬರ್ ದೇಶಾದ್ಯಂತ ಭಾರತ್ ಸ್ಟೇಜ್ -3 ಅನುಷ್ಠಾನಗೊಳಿಸಲಾಯ್ತು. 2020ರ ವೇಳೆಗೆ ಭಾರತದಲ್ಲಿ ಬಿಎಸ್-6 ಮಾನದಂಡ ಜಾರಿಗೊಳಿಸಲು ಮುಂದಾಗಿದೆ.

ಬಿಎಸ್4 ಇಂಧನವನ್ನ ಬಿಎಸ್6 ವಾಹನಗಳಿಗೆ ಹಾಕಿದ್ರೆ ಏನಾಗುತ್ತದೆ?
ಬಿಎಸ್6 ಕಾರ್ ಗಳಲ್ಲಿ ಬಿಎಸ್6 ಇಂಧನದಿಂದ ಕಾರ್ಯನಿರ್ವಹಿಸಬಲ್ಲ ಅಪ್‍ಡೇಟೆಡ್ ಹಾರ್ಡ್‍ವೇರ್(ಇಂಜೆಕ್ಟರ್) ಹಾಗೂ ಎಕ್ಸ್ಹಾಸ್ಟ್ ಸ್ಟ್ರೀಮ್‍ನಲ್ಲಿ ಹೆಚ್ಚುವರಿ ಘಟಕಗಳು ಇರುತ್ತವೆ. ಉದಾಹರಣೆಗೆ ಎಕ್ಸಾಸ್ಟ್ ಸಿಸ್ಟಂ ನಲ್ಲಿ ಡೀಸೆಲ್ ಪಾರ್ಟಿಕುಲೇಟ್ ಫಿಲ್ಟರ್ ಹಾಗೂ ಕೆಲವದರಲ್ಲಿ ಯೂರಿಯಾ ಇಂಜೆಕ್ಷನ್ ಕೂಡ ಇರುತ್ತದೆ. ಹೆಚ್ಚಿನ ಪ್ರಮಾಣದ ಸಲ್ಫರ್ಯುಕ್ತ ಹಳೆಯ ಇಂಧನವನ್ನ ಹೊಸ ಎಂಜಿನ್‍ನಲ್ಲಿ ಬಳಸಿದ್ರೆ ಡೀಸೆಲ್ ಪಾರ್ಟಿಕುಲೇಟ್ ಫಿಲ್ಟರ್ ಗಳು ಬ್ಲಾಕ್ ಆಗಿ ಬೇಗನೆ ಬದಲಾವಣೆ ಮಾಡಬೇಕಾಗುತ್ತದೆ. ಜೊತೆಗೆ ಎಂಜಿನ್ ತನ್ನ ಸಾಮಥ್ರ್ಯಕ್ಕಿಂತ ಕಡಿಮೆ ಕಾರ್ಯ ನಿರ್ವಹಣೆ ಮಾಡುತ್ತದೆ. ವಾಹನದ ಮೈಲೇಜ್ ಮತ್ತು ಒಟ್ಟಾರೆ ಹೊಗೆ ಹೊರಸೂಸುವಿಕೆಯ ಮೇಲೂ ಪರಿಣಾಮ ಬೀರುತ್ತದೆ. ಬಿಎಸ್6 ಕಾರಿನಲ್ಲಿ ಬಿಎಸ್4 ಇಂಧನ ಬಳಸಿದಾಗ ಆಗುವ ತೊಂದರೆ ಬೇಗನೆ ಗೊತ್ತಾಗುತ್ತದೆ.

petrol pump 4

ಬಿಎಸ್4 ವಾಹನಗಳಿಗೆ ಬಿಎಸ್6 ಇಂಧನ ಹಾಕಿದ್ರೆ ಏನಾಗುತ್ತೆ?
ಬಿಎಸ್4 ನಿಂದ ಬಿಎಸ್6ಗೆ ಏರುವ ಪೆಟ್ರೋಲ್‍ನ ರಾಸಾಯನಿಕ ಅಂಶಗಳಲ್ಲಿ ಅಷ್ಟೇನೂ ವ್ಯತ್ಯಾಸವಿರುವುದಿಲ್ಲ. ಆದ್ರೆ ಡೀಸೆಲ್‍ನಲ್ಲಿ ನಿಜವಾದ ವ್ಯತ್ಯಾಸವಿರುತ್ತದೆ. ಈಗಿರುವ ಡೀಸೆಲ್‍ಗೆ ಹೋಲಿಸಿದ್ರೆ ಹೊಸ ಡೀಸೆಲ್‍ನಲ್ಲಿ ಸಲ್ಫರ್ ಪ್ರಮಾಣ ಕಡಿಮೆ ಇರುತ್ತದೆ. ಈ ಹಿಂದೆ ಲಭ್ಯವಿದ್ದ ಡೀಸೆಲ್‍ನಲ್ಲಿ 500 ಪಿಪಿಎಂ(ಪಾಟ್ರ್ಸ್ ಪರ್ ಮಿಲಿಯನ್) ಸಲ್ಫರ್ ಇರುತ್ತಿತ್ತು. ಆದ್ರೆ ಈಗಿರುವ ಡೀಸೆಲ್‍ನಲ್ಲಿ 50 ಪಿಪಿಎಂ ಸಲ್ಫರ್ ಇದ್ದು ಲೋ ಸಲ್ಫರ್ ಡೀಸೆಲ್ ಎಂದೇ ಕರೆಯಲಾಗುತ್ತದೆ. ಇನ್ನು ಬಿಎಸ್6 ಇಂಧನದಲ್ಲಿ ಕೇವಲ 10 ಪಿಪಿಎಂ ಸಲ್ಫರ್ ಮಾತ್ರ ಇರುತ್ತದೆ. ಇದು ಪರಿಸರಕ್ಕಾಗಿ ಮತ್ತಷ್ಟು ಸ್ವಚ್ಛ ಹಾಗೂ ಉತ್ತಮವಾಗಿರುತ್ತದೆ. ಎಂಜಿನ್ ಕೂಡ ಸ್ವಚ್ಛವಾಗಿ ಕಾರ್ಯ ನಿರ್ವಹಿಸುತ್ತದೆ. ಬಿಎಸ್4 ಎಂಜಿನ್‍ನಲ್ಲಿ ಬಿಎಸ್6 ಇಂಧನದ ಬಳಕೆಯಿಂದ ದೀರ್ಘಾವಧಿ ಪರಿಣಾಮಗಳು ಇವೆ.

ಇಂಧನದಲ್ಲಿನ ಸಲ್ಫರ್ ಡೀಸೆಲ್ ಎಂಜಿನ್‍ಗಳಲ್ಲಿನ ಇಂಜೆಕ್ಟರ್ ಗಳ ರಾಸಾಯನಿಕ ತೈಲಲೇಪನಕ್ಕೆ ಸಹಾಯ ಮಾಡುತ್ತದೆ. ಡೀಸೆಲ್ ಎಂಜಿನ್‍ಗಳು ದ್ರವವನ್ನು ತುಂತುರು ಹನಿಗಳಾಗಿ ಪರಿವರ್ತಿಸಲು ಇಂಜೆಕ್ಟರ್ ಗಳನ್ನು ಅವಲಂಬಿಸುತ್ತವೆ. ಒಂದು ವೇಳೆ ಡೀಸೆಲ್‍ನಲ್ಲಿ ಸಲ್ಫರ್ ಪ್ರಮಾಣ ಕಡಿಮೆಯಿದ್ದರೆ ಇಂಜೆಕ್ಟರ್ ನಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಹೊಗೆ ಹೊರಸೂಸುವಿಕೆಯೂ ಹೆಚ್ಚಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *