ಮೈಸೂರು: ದಸರೆ ಮುಗಿದ ಬಳಿಕ ನಾಡಿನ ಅಧಿದೇವತೆಯನ್ನು ಕಣ್ತುಂಬಿಕೊಳ್ಳಲು ಭಕ್ತರಿಗೆ ಇಂದು ಮತ್ತೊಂದು ಅವಕಾಶ ಸಿಕಿದ್ದು, ಭಕ್ತರು ತಾಯಿಯ ದರ್ಶನವನ್ನು ಪಡೆದು ಉಘೇ ಉಘೇ ಚಾಮುಂಡಿ ಎಂದು ಜೈಕಾರ ಕೂಗಿದರು.
ಹೌದು, ದಸರೆಯ ಬಳಿಕ ಚಾಮುಂಡಿ ಬೆಟ್ಟದಲ್ಲಿ ಅಧಿದೇವತೆ ಚಾಮುಂಡೇಶ್ವರಿಯ ರಥೋತ್ಸವವನ್ನು ಅದ್ಧೂರಿಯಾಗಿ ನೇರವೇರಿಸಲಾಗಿದೆ. ಮಂಗಳವಾರ ಬೆಳಗ್ಗೆ 8.10 ರಿಂದ 8.40 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ರಥೋತ್ಸವ ಕಾರ್ಯಕ್ರಮ ಜರುಗಿತು.
ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಮುಂಡಿಯ ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಸರಾದ ಅಂತಿಮ ಕಾರ್ಯಕ್ರಮವಾದ ತಾಯಿ ಚಾಮುಂಡೇಶ್ವರಿಯ ರಥೋತ್ಸವವು ಶಾಸ್ತ್ರೋಕ್ತವಾಗಿ ನೇರವೇರಿದ್ದು, ತಾಯಿ ಚಾಮುಂಡಿಯು ನಾಡಿನ ಜನತೆಗೆ ಆಶೀರ್ವಾದ ನೀಡಲಿ ಎಂದು ಹಾರೈಸಿದರು.
ಮೆರವಣಿಗೆಗೂ ಮುನ್ನ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆಗಳೊಂದಿಗೆ ಹೊರಗೆ ತಂದು, ಪಲ್ಲಕ್ಕಿ ಮೇಲಿರಿಸಿ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಲಾಯಿತು. ನಂತರ ದೇವಿಯ ಮೂರ್ತಿಯನ್ನು ರಥೋತ್ಸವದಲ್ಲಿ ಇರಿಸಲಾಗಿತ್ತು. ಬೆಳಗ್ಗಿನಿಂದಲೂ ನಾಡ ದೇವಿಗೆ ವಿಶೇಷ ಪೂಜೆ, ಅಲಂಕಾರ ಮಾಡಿದ್ದ ಆಗಮಿಕರು, ಶುಭ ಲಗ್ನದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿಸಿದ್ದರು.
ಮೆರವಣಿಗೆ ವೇಳೆ ಸಾವಿರಾರು ಸಂಖ್ಯೆಯಲ್ಲಿ ಬೆಟ್ಟಕ್ಕೆ ಆಗಮಿಸಿದ ಭಕ್ತರು, ರಥಕ್ಕೆ ಹಣ್ಣು-ಜವನ ಎಸೆದು ತಮ್ಮ ಬೇಡಿಕೆ ಈಡೇರಿಸು ತಾಯಿ ಎಂದು ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲದೇ ವಿಶೇಷವಾಗಿ ಪೊಲೀಸ್ ಬ್ಯಾಂಡ್ ಹಾಗೂ ಕಲಾತಂಡಗಳು ರಥೋತ್ಸವದ ಸಂಭ್ರಮಕ್ಕೆ ಮೆರಗು ತಂದಿದ್ದವು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv