ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಕುಂದಾನಗರಿ ಬೆಳಗಾವಿಯಲ್ಲಿ ಎಂಇಎಸ್ ಕಿರಿಕ್ ಆರಂಭವಾಗುತ್ತದೆ. ಕರಾಳ ದಿನಾಚರಣೆ ಸೇರಿದಂತೆ ಇನ್ನಿಲ್ಲದ ನಾಡ ವಿರೋಧಿ ಕೃತ್ಯಕ್ಕೆ ಕೈ ಹಾಕುತ್ತದೆ. ಇದಕ್ಕೆ ಪುಷ್ಟಿ ಎನ್ನುವಂತೆ ಬೆಳಗಾವಿ ಜಿಲ್ಲಾಡಳಿತ ಕಡೆ ಕ್ಷಣದವರೆಗೆ ಕಾದು ನೋಡುವ ತಂತ್ರ ಅನುಸರಿಸಿ ಕಡೆಗೆ ಕರಾಳ ದಿನಾಚರಣೆ ಅನುಮತಿ ನೀಡುತ್ತಾರೆ.
ಗಡಿ ಜಿಲ್ಲೆ ಬೆಳಗಾವಿ ಸಿಹಿ ಸಿಹಿ ಕುಂದಾಗೆ ಎಷ್ಟು ಫೇಮಸ್ಸೋ ಭಾಷಾ ವಿವಾದ, ಗಡಿ ಗಲಾಟೆಗೂ ಅಷ್ಟೇ ಹೆಸರುವಾಸಿ. ಕ್ಯಾಲೆಂಡರ್‍ನಲ್ಲಿ ನವೆಂಬರ್ 1 ಬರುತ್ತಿದ್ದಂತೆ ಬೆಳಗಾವಿಯಲ್ಲಿ ಎಂಇಎಸ್ ಸಭೆ ಮೇಲೆ ಸಭೆ ನಡೆಸುತ್ತದೆ. ಮೇಲಿಂದ ಮೇಲೆ ಡಿಸಿ ಕಚೇರಿಗೆ ಬಂದು ನಾಡ ವಿರೋಧಿ ಚಟುವಟಿಕೆಗೆ ಅನುಮತಿ ಕೇಳುತ್ತಾರೆ. ನಮ್ಮ ಅಧಿಕಾರಿಗಳು ಸಹ ಯಾರದ್ದೋ ಒತ್ತಡಕ್ಕೆ ಮಣಿದು ನಾಡು ನುಡಿ ಎಂಬ ಅಭಿಮಾನ ಮರೆತು ಕರಾಳ ದಿನಾಚರಣೆಗೆ ಪರವಾನಿಗೆ ನೀಡುತ್ತಾರೆ. ಈ ಬಗ್ಗೆ ಅಧಿಕಾರಿಗಳನ್ನ ಕೇಳಿದ್ರೆ ಈ ಕುರಿತು ಏನನ್ನು ನಿರ್ಧಾರ ಮಾಡಿಲ್ಲ. ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತೇವೆ. ನೊಡೋಣ ಎಂಬ ರೆಡಿಮೇಡ್ ಉತ್ತರ ನೀಡ್ತಾರೆ.
ನಾಡ ಹಬ್ಬವನ್ನು ಆಚರಿಸಲು ಜಿಲ್ಲೆಯ ಮೂಲೆ ಮೂಲೆಗಳಿಂದ ಕನ್ನಡಿಗರು, ಕನ್ನಡ ಪರ ಜನರು, ಹೋರಾಟಗಾರರು ಕುಂದಾನಗರಿ ಬೆಳಗಾವಿಗೆ ಆಗಮಿಸುತ್ತಾರೆ. ತಮ್ಮದೇ ಶೈಲಿಯಲ್ಲಿ ದಿನವಿಡೀ ಬೆಳಗಾವಿ ಮಹಾನಗರದಲ್ಲಿ ನಡೆಯುವ ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ವಿಪರ್ಯಾಸ ಅಂದ್ರೆ ಇಷ್ಟೆಲ್ಲಾ ಸರ್ಕಾರಗಳು ಬಂದರೂ ಕರಾಳ ದಿನಾಚರಣೆಗೆ ಪರವಾನಿಗೆ ಕೊಡುವುದು ಮಾತ್ರ ನಿಂತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇದಕ್ಕೆ ಬ್ರೇಕ್ ಹಾಕ್ತಾರಾ ಎಂಬುವುದು ಮುಂದಿನ ದಿಗಳಲ್ಲಿ ತಿಳಿಯಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv