ನವದೆಹಲಿ: ಕಾಂಗ್ರೆಸ್ ಜೊತೆ ಹೆಚ್ಚು ಗುರುಸಿಕೊಳ್ಳಬೇಡಿ ಎಂದು ಬಿಎಸ್‍ಪಿ ಶಾಸಕ ಎನ್ ಮಹೇಶ್ ಅವರಿಗೆ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಂಗಳವಾರ ಎನ್ ಮಹೇಶ್ ದೆಹಲಿಯಲ್ಲಿ ಮಾಯಾವತಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ದೆಹಲಿಯಲ್ಲಿ ನಡೆದ ಬಿಎಸ್‍ಪಿ ಸಭೆಯಲ್ಲಿ ಮಾಯಾವತಿಯವರು ಎನ್. ಮಹೇಶ್‍ಗೆ, ಕಾಂಗ್ರೆಸ್ ಜೊತೆಗೆ ರಾಜ್ಯದಲ್ಲಿ ಹೆಚ್ಚು ಗುರುತಿಸಿಕೊಳ್ಳಬೇಡಿ. ಮೈತ್ರಿ ಸರ್ಕಾರ ಇದ್ದರೂ, ಕಾಂಗ್ರೆಸ್ ನಡೆಗೆ ಬೆಂಬಲ ನೀಡದೇ ತಟಸ್ಥವಾಗಿರಿ. ಅಲ್ಲದೇ ಜೆಡಿಎಸ್ಸಿಗೆ ನೀಡಿರುವ ಬೆಂಬಲವನ್ನು ಲೋಕಸಭಾ ಚುನಾವಣೆಯಲ್ಲಿಯೂ ಮುಂದುವರಿಸಿ. ಈಗಾಗಲೇ ನಾವು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ಸನ್ನು ವಿರೋಧಿಸಿದ್ದೇವೆ. ಹೀಗಾಗಿ ಕಾಂಗ್ರೆಸ್ ಬಗ್ಗೆ ಮೃದು ಧೋರಣೆ ತೋರುವ ಅವಶ್ಯಕತೆ ಬೇಡ. ನೀವು ಸಚಿವರಾದ ಬಳಿಕ ರಾಜ್ಯದಲ್ಲಿ ಕಾರ್ಯಕರ್ತರಿಗೆ ಹೊಸ ಹುರುಪು ಬಂದಿದೆ. ಮೊದಲು ಪಕ್ಷ ಸಂಘಟನೆಗೆ ಹೆಚ್ಚಿನ ಆಧ್ಯತೆ ನೀಡಿ. ಜಿಲ್ಲಾ ಹಾಗೂ ತಾಲೂಕು ಮಟ್ಟಗಳಲ್ಲಿ ಪಕ್ಷವನ್ನು ಸಂಘಟಿಸಿ ಬಲಿಷ್ಟಗೊಳಿಸಿ. ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಸ್ಥಾನಗಳ ಗೆಲುವಿಗೆ ಪ್ರಯತ್ನಿಸಿ ಎಂದು ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿವೆ.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮಹೇಶ್, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿತ್ತು. ಪಕ್ಷದ ಸಂಘಟನೆ ಕುರಿತು ಚರ್ಚೆ ನಡೆದಿದೆ. ಕರ್ನಾಟಕದಿಂದ ಇಪ್ಪತ್ತಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದೇವು. ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ನಾಯಕರು ಸಹ ಭಾಗವಹಿಸಿದ್ದರು. ಲೋಕಸಭೆಗೆ ಪಕ್ಷ ಸಂಘಟಿಸಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಆದರೆ ನಾನು ಲೋಕಸಭೆಗೆ ಸ್ಪರ್ಧೆ ಮಾಡಲ್ಲ. ಲೋಕ ಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿಗಳು ಕೇವಲ ವಂದತಿ ಮಾತ್ರ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ನಾವು ಕಾಂಗ್ರೆಸ್ಸಿಗೆ ಬೆಂಬಲ ನೀಡುವುದಿಲ್ಲ. ರಾಜ್ಯದಲ್ಲಿ ಜೆಡಿಎಸ್ ಜೊತೆಗೆ ಮಾತ್ರ ಮೈತ್ರಿ ಮಾಡಿಕೊಂಡಿದ್ದೇವೆ. ಹೀಗಾಗಿ ಉಪಚುನಾವಣೆಯಲ್ಲಿ ಜೆಡಿಎಸ್ ಗೆ ಬೆಂಬಲ ನೀಡುತ್ತೇವೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಭಾಗಿದಾರ ಹಿನ್ನೆಲೆ ಅನಿವಾರ್ಯತೆ ಇದೆ. ಆದರೆ ನಾವು ಮಾತ್ರ ಜೆಡಿಎಸ್‍ಗೆ ಬೆಂಬಲ ನೀಡುತ್ತೇವೆ. ಅಲ್ಲದೇ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ರಾಜ್ಯಾದ್ಯಂತ ಪ್ರವಾಸ ಮಾಡಲು ಹಿರಿಯ ನಾಯಕರಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv