ಮೈಸೂರು ಅರಮನೆಯ ಇತಿಹಾಸದ ಗತವೈಭವ ತಿಳಿದುಕೊಳ್ಳಿ!

Public TV
6 Min Read
MYS PALACE

ಮೈಸೂರು ಮಲ್ಲಿಗೆ, ನಂಜನಗೂಡು ಬಾಳೆ ಹಾಗೂ ವೀಳೆಯದೆಲೆ, ಮೈಸೂರು ದಸರೆಯಷ್ಟೇ ಮೈಸೂರು ಅರಮನೆಯೂ ವಿಶ್ವವಿಖ್ಯಾತ. ಕರುನಾಡ ನೆಲದಲ್ಲಿ ಕಟ್ಟಲಾದ ಇತ್ತೀಚಿನ ಅರಮನೆ ಎಂಬ ಖ್ಯಾತಿಯೂ ಈ ಅರಮನೆಗಿದೆ. ಕರುನಾಡ ಹೆಮ್ಮೆಯ ರಾಜಮನೆತನಗಳಲ್ಲಿ ಮೈಸೂರು ಒಡೆಯರ ವಂಶವೂ ಒಂದು. ಕರ್ನಾಟಕದ ಇಂದಿನ ಸಾಂಸ್ಕೃತಿಕ ರಾಜಧಾನಿ ಮೈಸೂರು ಅರಮನೆಗಳ ನಗರಿ ಎಂದು ಖ್ಯಾತವಾಗಿದ್ದೇ ಒಡೆಯರ ಕಾಲದಲ್ಲಿ.

ಭಾರತೀಯ ಸಾಂಪ್ರದಾಯಿಕ ವಾಸ್ತುಶಿಲ್ಪದಿಂದ ಒಡಮೂಡಿದ ಈ ಸುಂದರ ಸೌಧ, ಬ್ರಿಟಿಷರು ಭಾರತದಲ್ಲಿ ಬಲವಾದ ಹಿಡಿತ ಹೊಂದಿದ್ದ ಹಾಗೂ ಆಧುನಿಕತೆಯ ಗಾಳಿ ಬೀಸುತ್ತಿದ್ದ ಕಾಲದಲ್ಲಿ ನಿರ್ಮಾಣವಾದ ಭವ್ಯ ಬಂಗಲೆ ಇದಾಗಿದೆ. ಚಚ್ಚೌಕದ ಕಂಬಗಳು, ಮೇಲೆ ಸುಂದರ ವಿನ್ಯಾಸದ ಗೋಪುರ, ವಿಶಾಲವಾದ ಮೈದಾನ, ಸುಂದರ ಹಾಗೂ ಮನಮೋಹಕ ಶಿಲ್ಪಗಳಿಂದ, ನುಣುಪಾದ ನೆಲಹಾಸು, ಗಾಜಿನ ಅಲಂಕಾರಿಕ ವಿನ್ಯಾಸದಿಂದ ಕೂಡಿದ ದರ್ಬಾರ್ ಹಾಲ್, ಅರಮನೆಯ ಸುತ್ತ ಇರುವ ಸಿಂಹ ಲಾಂಛನಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

150909kpn88

ದಿನನಿತ್ಯ ದೀಪಾಲಂಕಾರದಿಂದ ಕಂಗೊಳಿಸುವ ಅರಮನೆಗೆ ದಸರಾ ವೇಳೆ ವಿಶೇಷ ಅಲಂಕಾರ ಮಾಡಿರಲಾಗಿರುತ್ತದೆ. ಈ ವೇಳೆ ಸಾರ್ವಜನಿಕ ವೀಕ್ಷಣೆಗೆ ಅರಮನೆ ಲಭ್ಯವಿರುತ್ತದೆ. ಮೈಸೂರು ಅರಮನೆಯು 97 ಸಾವಿರಕ್ಕೂ ಹೆಚ್ಚು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ರಾತ್ರಿಯ ಹೊತ್ತು ವಿದ್ಯುತ್ ದೀಪಾಲಂಕಾರಗಳಿಂದ ಗತವೈಭವ ಮೆರೆಯುತ್ತದೆ.

ಅಂಬಾ ವಿಲಾಸ್ ಅರಮನೆ ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆಯಾಗಿದೆ. ಮೈಸೂರು “ಅರಮನೆಗಳ ನಗರಿ” ಎಂದೇ ಕರೆಯಲಾಗುತ್ತದೆ. “ಮೈಸೂರು ಅರಮನೆ” ಎನ್ನುವಾಗ ಸಾಮಾನ್ಯವಾಗಿ ಮುಖ್ಯ ಅರಮನೆಯಾದ ಅಂಬಾ ವಿಲಾಸವನ್ನು ಮುಖ್ಯವಾಗಿ ಹೇಳಲಾಗುತ್ತದೆ.

150222kpn37

ಅರಮನೆಯ ಇತಿಹಾಸ ಏನು?
ಮೈಸೂರು ಸಂಸ್ಥಾನ 1399 ರಿಂದ 1947 ರ ಭಾರತದ ಸ್ವಾತಂತ್ರ್ಯದ ವರೆಗೂ `ಒಡೆಯರ್ ವಂಶದ ಅರಸ’ರಿಂದ ಆಳಲ್ಪಟ್ಟಿತ್ತು.(ಮಧ್ಯದಲ್ಲಿ ಸ್ವಲ್ಪ ಕಾಲ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರು ಸಹ ಆಡಳಿತವನ್ನು ನಡೆಸಿದ್ದರು). ಒಡೆಯರ್ ಅರಸರು 14ನೇಯ ಶತಮಾನದಲ್ಲಿಯೇ ಒಂದು ಅರಮನೆಯನ್ನು ಮೈಸೂರಿನಲ್ಲಿ ಕಟ್ಟಿಸಿದ್ದರು. ಈ ಅರಮನೆ 1638 ರಲ್ಲಿ ಸಿಡಿಲು ಹೊಡೆದು ಹಾಳಾಗಿತ್ತು. ಹೀಗಾಗಿ ಅದನ್ನು ರಿಪೇರಿ ಮಾಡಿಸಲಾಗಿತ್ತು. ಆದರೆ 18ನೆಯ ಶತಮಾನದ ಕೊನೆಯ ಹೊತ್ತಿಗೆ ಅರಮನೆ ಮತ್ತಷ್ಟು ಹಾಳಾಗಿದ್ದರಿಂದ 1793 ರ ಟಿಪ್ಪು ಕಾಲಾವಧಿಯಲ್ಲಿ ಅದನ್ನು ಬೀಳಿಸಲಾಗಿತ್ತು. ಇದಾದ ಬಳಿಕ 18ಂ3 ರಲ್ಲಿ ಮರ ಹಾಗೂ ಇಟ್ಟಿಗೆಗಳಿಂದ ಅರಮನೆಯನ್ನು ಪುನಃ ನಿರ್ಮಿಸಿಲಾಗಿತ್ತು.

ಆದರೆ 1897 ರಲ್ಲಿ ರಾಜಕುಮಾರಿ ಜಯಲಕ್ಷಮ್ಮಣ್ಣಿ ಅವರ ಮದುವೆಯ ಸಂದರ್ಭದಲ್ಲಿ ಬೆಂಕಿ ಬಿದ್ದ ಪರಿಣಾಮ ಮರದ ಅರಮನೆ ಸಂಪೂರ್ಣವಾಗಿ ನಾಶವಾಗಿ ಹೋಯಿತು. ಆಗ ಮೈಸೂರು ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನದ ಇನ್ನೊಂದು ಅರಮನೆಯನ್ನು ಕಟ್ಟಲು ಮದ್ರಾಸ್ ಸರ್ಕಾರದ ಸಲಹೆಗಾರ ಹಾಗೂ ಬ್ರಿಟಿಷ್ ಇಂಜಿನಿಯರ್ ಆಗಿದ್ದ ಹೆನ್ರಿ ಇರ್ವಿನ್ ಅವರನ್ನು ನೇಮಿಸಿದ್ದರು. ಆ ಕಾಲದಲ್ಲಿಯೇ ಇರ್ವಿನ್‍ರವರು ಅರಮನೆಯ ನಕಾಶೆ ಸಿದ್ಧಪಡಿಸಿಲು 12 ಸಾವಿರ ಪಡೆದುಕೊಂಡಿದ್ದರು. ಅಲ್ಲದೇ ಅರಮನೆಯ ಮುಖ್ಯ ಇಂಜಿನಿಯರ್ ಆಗಿ ಬಿ.ಪಿ.ರಾಘವಲುನಾಯಿಡು ಕೆಲಸ ಮಾಡಿದ್ದರೆ, ಅರಮನೆಯಲ್ಲಿ ಚಿತ್ರರಚಿಸಲು ನಾಗರಾಜು ಎಂಬ ಕಲಾವಿದರನ್ನು ಚಿತ್ರರಚನೆಯ ಅಧ್ಯಯನಕ್ಕಾಗಿ ಯುರೋಪಿನ ರಾಜ್ಯಗಳಿಗೆ ಕಳುಹಿಸಿಕೊಟ್ಟಿದ್ದರು. ಕೇವಲ ಕಲಾಕೃತಿಗಳನ್ನು ನೋಡಿಕೊಂಡು ಬರುವುದಕ್ಕೆ 2,439 ರೂಪಾಯಿಯನ್ನು ಮೈಸೂರು ಸಂಸ್ಥಾನ ವ್ಯಯಿಸಿತ್ತು.

150527kpn93

ನಂತರ 1897 ರಿಂದ ಆರಂಭಗೊಂಡ ಈಗೀನ ಅರಮನೆಯ ನಿರ್ಮಾಣ ಕಾರ್ಯವು 1911-12ರಲ್ಲಿ ಪೂರ್ಣಗೊಂಡಿತ್ತು. ಅರಮನೆ ನಿರ್ಮಾಣ ಕಾರ್ಯಕ್ಕೆ ಒಟ್ಟು 41,47,913 ರೂಪಾಯಿ ವೆಚ್ಚವಾಗಿತ್ತು. ಕೋಟೆ ಸೇರಿದಂತೆ ಸುಮಾರು 72 ಎಕರೆಗಿಂತಲೂ ಹೆಚ್ಚಿನ ವಿಸ್ತಾರದಲ್ಲಿ ನೆಲೆನಿಂತಿರುವ ಅರಮನೆ 74.50 ಮೀ ಉದ್ದ ಹಾಗೂ 47.50 ಮೀಟರ್ ಅಗಲವನ್ನು ಹೊಂದಿದೆ. ಅರಮನೆಯ ಮುಖ್ಯ ಕಟ್ಟಡವನ್ನು ಕಂದು ಬಣ್ಣದ ದಪ್ಪ ಸ್ಪಟಿಕದ ಗಟ್ಟಿ ಶಿಲೆಗಳಿಂದ ನಿರ್ಮಿಸಲಾಗಿದೆ. ಅರಮನೆಯ ಮಧ್ಯಭಾಗದ ಐದು ಅಂತಸ್ತಿನ ಬಂಗಾರದ ಗಿಲೀಟಿನ ಗಗನಚಂಬಿ ಗೋಪುರವು ಭೂಮಿಯಿಂದ ಸುಮಾರು 145 ಅಡಿ ಎತ್ತರದಲ್ಲಿದೆ.

ಅರಮನೆಯ ವಾಸ್ತುಶಿಲ್ಪ:
ಅರಮನೆಯ ವಾಸ್ತುಕಲೆಯ ಶೈಲಿಯನ್ನು ಸಾಮಾನ್ಯವಾಗಿ “ಇಂಡೋ-ಸಾರ್ಸೇನಿಕ್” ಶೈಲಿಯಲ್ಲಿ ನಿರ್ಮಿಸಲಾಗಿದೆ. ಮುಖ್ಯವಾಗಿ ಹಿಂದೂ, ಮುಸ್ಲಿಮ್, ಮತ್ತು ಗೋಥಿಕ್ ಶೈಲಿಯ ವಾಸ್ತುಕಲೆಗಳನ್ನು ಅರಮನೆಯ ನಿರ್ಮಾಣದಲ್ಲಿ ಕಾಣಬಹುದು. ಕಲ್ಲಿನಲ್ಲಿ ಕಟ್ಟಲಾಗಿರುವ ಅರಮನೆಯಲ್ಲಿ ಮೂರು ಮಹಡಿಗಳಿದ್ದು, ಕೆಂಪು ಅಮೃತಶಿಲೆಯ ಕಂಬಗಳು ಹಾಗೂ 145 ಅಡಿ ಎತ್ತರದ ಐದು ಮಹಡಿಗಳುಳ್ಳ ಗೋಪುರವನ್ನು ಅರಮನೆಯಲ್ಲಿ ಕಾಣಬಹುದು. ಅಲ್ಲದೇ ಅರಮನೆಯ ಸುತ್ತಲೂ ದೊಡ್ಡ ಉದ್ಯಾನವನವೂ ಇದೆ.

170921kpn88

ಅರಮನೆಯು ಬೆಳಕಿಗೆ ಬಿಟ್ಟಿರುವ ಅಂಗಳದ (ತೊಟ್ಟಿ) ಸುತ್ತಲೂ ಕಟ್ಟಲ್ಪಟ್ಟಿದೆ. ಈ ತೊಟ್ಟಿಯ ಪೂರ್ವಭಾಗಕ್ಕೆ 21 ಅಡಿ ಅಗಲ ಹಾಗೂ 66 ಅಡಿ ಎತ್ತರವಿರುವ ಆಕರ್ಷಕ ಆನೆಯ ದ್ವಾರವಿದೆ. ದೊಡ್ಡ ಅಂಗಳದಲ್ಲಿ ಹೊರಗಡೆ ಸಜ್ಜೆಗೆ ಹೋಗುವ 15 ಅಡಿ ಅಗಲವುಳ್ಳ ದಾರಿಗಳು ದೊಡ್ಡ ಚೌಕದ ಹಾಗೆ ಕಾಣುತ್ತವೆ. ಇನ್ನು ಎರಡನೆ ಅಂತಸ್ತಿನಲ್ಲಿ ಪೂರ್ವ ಭಾಗಕ್ಕೆ 155 ಅಡಿ ಅಗಲವಿರುವ ವಿಶಾಲ ರಾಜ ಸಭಾಮಂದಿರವಿದೆ. ಅದರ ಮೇಲೆ ಖಾಸಗಿ ನಿವಾಸಿ ಸ್ಥಳಗಳಿವೆ.

ಅರಮನೆಯ ಮೊದಲನೇ ಮಹಡಿಯ ಉತ್ತರ ಭಾಗದಲ್ಲಿ ಆಯುಧಶಾಲೆ, ಪುಸ್ತಕ ಭಂಡಾರ ಇದ್ದು, ಎರಡನೇ ಮಹಡಿಯಲ್ಲಿ ಸಂಗೀತದ ಕೊಠಡಿ, ಸ್ತ್ರೀಯರ ಸ್ವಾಗತ ಕೊಠಡಿ ಮತ್ತು ಮೂರನೆಯ ಅಂತಸ್ತಿನಲ್ಲಿ ವಿಶ್ರಾಂತಿ ಕೊಠಡಿಗಳಿವೆ. ಒಳ ಅಂಗಳದ ಪಶ್ಚಿಮಕ್ಕೆ ಹಳೆಯ ಅರಮನೆಯಿದೆ. ದಕ್ಷಿಣ ಭಾಗದ ಹತ್ತಿರದಲ್ಲೇ ಮುದ್ದಾದ ನವಿಲಿನ ಕಲ್ಯಾಣ ಭದ್ರಮಂಟಪವಿದೆ. ಹಾಗೇ ಮುಂದೆ ಸಾಗಿದರೆ ಎರಡನೇ ಉಪ್ಪರಿಗೆಯಲ್ಲಿ ಅಂಬಾವಿಲಾಸ ಸಭಾ ಮಂಟಪವಿದೆ. ಅರಮನೆಯ ದಕ್ಷಿಣ ಭಾಗದಲ್ಲಿ ರಾಣೀವಿಲಾಸ ಹಾಗೂ ಪೂಜಾ ಕೊಠಡಿಗಳಿವೆ. ಮಧ್ಯಭಾಗದ ಮೂರು ನಾಲ್ಕು ಮತ್ತು ಐದನೇ ಅಂತಸ್ತುಗಳು ಮುಖ್ಯಗೋಪುರ ಶಿಖರಕ್ಕೆ ಆಧಾರಸ್ತಂಭಗಳಂತೆ ನಿಂತಿವೆ.

151013kpn78

ಅರಮನೆಯ ಹೊರನೋಟ ಹಿಂದೂ ಗ್ರೀಕ್ ಕಲೆಯ ರೂಪರೇಖೆಗಳಂತೆ ಕಂಡರೆ, ಬಾಗಿಲುಗಳ ಕಮಾನುಗಳ ಕಂಬಗಳ ಅಲಂಕಾರಗಳು ಸ್ಪಷ್ಟ ಹೊಯ್ಸಳ ರೀತಿಯ ಕಲಾಕೃತಿಗಳಾಗಿವೆ. ಅರಮನೆಯ ಮಧ್ಯದ ಗೋಪುರವು ಪ್ರಭಾವಯುತವಾಗಿದ್ದು ಉಳಿದವುಗಳೆಲ್ಲವೂ ಅದಕ್ಕೆ ಹೊಂದಿಕೊಂಡ ಆಕೃತಿಗಳಾಗಿವೆ. ಅರಮನೆಯ ಮುಖ್ಯ ಮುಖಭಾಗದಲ್ಲಿ ಬೆಳಕು ಮತ್ತು ನೆರಳನ್ನು ಪಡೆಯುವ ಉದ್ದೇಶದಿಂದ ಗೋಪುರಗಳ, ಮಸೀದಿಯ ರೀತಿಯ ಶಿಖರಗಳ ಕೈಸಾಲೆ, ಉಪ್ಪರಿಗೆಯ ಮೊಗಸಾಲೆಗಳನ್ನು ಕಾಣಬಹುದು. ಮುಂಭಾಗದಲ್ಲಿ ಬೃಹತ್ ಕಂಬಗಳ ಜೊತೆಗೆ ಸ್ಪಟಿಕದ ಗಟ್ಟಿ ಶಿಲೆಗಳನ್ನು ಕೊರೆದು ನಿರ್ಮಿಸಿರುವ, ಪಡಸಾಲೆ, ಉಪ್ಪರಿಗೆಯ ಮೊಗಸಾಲೆಗಳು ತಮ್ಮದೇ ಆದ ಶ್ರೀಮಂತಿಕೆಯ ವೈಭವವನ್ನು ಸೂಚಿಸುತ್ತವೆ.

ಅರಮನೆಯ ಅಡಿಪಾಯದಿಂದ ಮುಖ್ಯ ಗೋಪುರದ ತುದಿಯವರೆಗೂ ಉತ್ತಮ ಮಟ್ಟದ ಹಿಂದೂ ಶಿಲ್ಪ ವಿದ್ಯೆಯ ನುರಿತ ಕೆಲಸಗಾರರಿಂದ ಶಿಲ್ಪಕಲೆ ರಚಿಸಲ್ಪಟ್ಟಿದೆ. ಅಲ್ಲದೆ ಉಚ್ಛ ರೀತಿಯ ಹಿಂದೂ ಶಿಲ್ಪ ಕಲೆ ಮತ್ತು ಗ್ರೀಕ್ ಕಲೆಯು ಮಿಶ್ರತೆಯಿಂದ ನಳನಳಿಸುತ್ತವೆ. ಅರಮನೆಯಲ್ಲಿ ಕಲ್ಲು, ದಂತ ಮತ್ತು ಮರದ ಕೆತ್ತನೆ ಕೆಲಸಗಳು ಕಲೆಗಾರನ ಕೈಚಳಕನ್ನು ಪ್ರದರ್ಶಿಸುತ್ತವೆ. ಕಟ್ಟಡದ ವಿವಿಧೆಡೆ ಸ್ಪಟಿಕದ ಕಲ್ಲು, ಕಂದುಬಣ್ಣದ ಶಿಲೆ, ಕಾಗೆ ಬಂಗಾರದಂತೆ ಮಿನುಗುವ ಬೆಣಚು ಶಿಲೆಗಳನ್ನು ಬಳಸಲಾಗಿದೆ. ಚಿತ್ರ ವಿಚಿತ್ರವಾದ ಬಣ್ಣದ ನಯಮಾಡಿದ ಕಲ್ಲಿನ ಕಂಬಗಳು ಯೋಗ್ಯ ಸ್ಥಳಗಳಲ್ಲಿ ನಿರ್ಮಿಸಲ್ಪಟ್ಟಿದೆ. ಅರಮನೆಯಲ್ಲಿರುವ ಅಂಬಾವಿಲಾಸ ದರ್ಬಾರ್ ಹಾಲ್ ರಾಜವೈಭವವನ್ನು ಸಾರುತ್ತದೆ. ಇಲ್ಲಿ 750 ಕೆ.ಜಿ. ತೂಕದ ಭವ್ಯ ಚಿತ್ತಾರದ ಚಿನ್ನದ ಅಂಬಾರಿ ಇದೆ. ಅಲ್ಲದೆ 135 ಕೆ.ಜಿ. ಬಂಗಾರವುಳ್ಳ ರತ್ನಖಚಿತ ಸಿಂಹಾಸನವೂ ಇದೆ.

160627kpn25

ಅರಮನೆಯ ಆಕರ್ಷಣೆಗಳು:
ದಿವಾನ್-ಎ-ಖಾಸ್: ಮುಘಲ್ ಸಾಮ್ರಾಜ್ಯದ ಅರಮನೆಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತಿದ್ದ ಕೋಣೆ. ಮೈಸೂರು ಅರಮನೆಯಲ್ಲಿಯೂ ಇದನ್ನು ಬಳಸಲಾಗಿದೆ. ಮುಖ್ಯವಾದ ಅತಿಥಿಗಳು ಬಂದಾಗ ಅವರನ್ನು ರಾಜರು ಎದುರುಗೊಳ್ಳಲು ಉಪಯೋಗಿಸುತ್ತಿದ್ದ ಕೋಣೆ ಇದು.

ದರ್ಬಾರ್ ಹಾಲ್: ರಾಜರ ದರ್ಬಾರು ನಡೆಯುತ್ತಿದ್ದ ಶಾಲೆ. ಇಲ್ಲಿಯೇ ಜನರು ರಾಜರನ್ನು ಭೇಟಿ ಮಾಡುತ್ತಿದ್ದರು. ಕಲ್ಯಾಣ ಮಂಟಪದಲ್ಲಿ ಚಿಕ್ಕ ಪುಟ್ಟ ಶುಭಕಾರ್ಯಗಳು ಸಹ ನಡೆಯುತ್ತಿದ್ದವು.

151023kpn36d

ಆಯುಧ ಶಾಲೆ: ರಾಜಮನೆತನದ ಸದಸ್ಯರು ಬಳಸುತ್ತಿದ್ದ ಆಯುಧಗಳನ್ನು ಇಲ್ಲಿ ಸಂರಕ್ಷಿಸಿದ ಇಡಲಾಗಿದೆ. ಇಲ್ಲಿ ಚಾರಿತ್ರಿಕವಾದ ಅನೇಕ ಆಯುಧಗಳನ್ನು ಕಾಣಬಹುದು. 14 ನೆಯ ಶತಮಾನದಲ್ಲಿ ಉಪಯೋಗಿಸಲ್ಪಡುತ್ತಿದ್ದ ಖಡ್ಗ, ಸುರಗಿ, ವ್ಯಾಗ್ರನಖ ಮೊದಲಾದ ಆಯುಧಗಳಿಂದ ಹಿಡಿದು 2ಂನೆಯ ಶತಮಾನದ ಪಿಸ್ತೂಲುಗಳು, ಬಂದೂಕುಗಳು ಮೊದಲಾದವನ್ನು ಇಲ್ಲಿ ಕಾಣಬಹುದು. ಮುಖ್ಯವಾಗಿ, ಒಡೆಯರ್ ವಂಶದ ಪ್ರಸಿದ್ಧ ಅರಸು ರಣಧೀರ ಕಂಠೀರವ ಉಪಯೋಗಿಸಿದ್ದ ಖಡ್ಗಗಳಲ್ಲಿ ಒಂದಾದ “ವಜ್ರಮುಷ್ಟಿ”, ಹಾಗೂ ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿ ಉಪಯೋಗಿಸುತ್ತಿದ್ದ ಖಡ್ಗಗಳಲ್ಲಿ ಕೆಲವನ್ನು ಇಲ್ಲಿ ನೋಡಬಹುದು.

ಅರಮನೆಯಲ್ಲಿರುವ ದೇವಸ್ಥಾನಗಳು:
ಅರಮನೆಯ ಆವರಣದಲ್ಲಿ 12 ದೇವಸ್ಥಾನಗಳಿವೆ. 14 ನೆಯ ಶತಮಾನದಲ್ಲಿ ಕಟ್ಟಿದ ಕೋಡಿ ಭೈರವನ ದೇವಸ್ಥಾನದಿಂದ ಹಿಡಿದು 1953 ರಲ್ಲಿ ಕಟ್ಟಲಾದ ದೇವಸ್ಥಾನಗಳೂ ಇವೆ. ಅವುಗಳಲ್ಲಿ ಪ್ರಸಿದ್ಧವಾದವು ಸೋಮೇಶ್ವರನ ದೇವಸ್ಥಾನ, ಲಕ್ಷ್ಮೀರಮಣ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನ, ಗಣೇಶ ದೇವಸ್ಥಾನ ಮತ್ತು ಶ್ವೇತ ವರಾಹ ಸ್ವಾಮಿ ದೇವಸ್ಥಾನಗಳು.

160627kpn66

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *