ಚಿಕ್ಕಮಗಳೂರು: ನಮ್ಮ ಜೊತೆ ಕೈಜೋಡಿಸ್ಲಿಲ್ಲ ಅಂತ ಬಿಜೆಪಿ ಅವರಿಗೆಗೆ ಜೆಡಿಎಸ್ ಕಂಡರೆ ಒಳಗೊಳಗೆ ಸಿಟ್ಟು. ಅಧಿಕಾರ ಮಾಡೋಕೆ ಬಿಡುತ್ತಿಲ್ಲೆಂದು ಬಿಜೆಪಿ ಕಂಡ್ರೆ ಕುಮಾರಣ್ಣ ಕೂಡ ಕೆಂಡಾಮಂಡಲ. ಅತ್ತ ಆಪರೇಷನ್ ಕಮಲಕ್ಕೂ ಬಿಡದ ಡಿಕೆಶಿ ಅಂದ್ರಂತು ಬಿಜೆಪಿಯವ್ರಿಗೆ ಬಿಸಿತುಪ್ಪ. ರಾಜ್ಯ ರಾಜಕಾರಣದ ಸ್ಥಿತಿಗತಿ ಹೀಗಿರುವಾಗ ರಾಜ್ಯಕ್ಕೆ ಮಾದರಿಯಾಗುವಂತಹಾ ಘಟನೆಯೊಂದು ಕಾಫಿನಾಡಲ್ಲಿ ನಡೆದಿದೆ.
ಬಡವನ ಕೋಪ ದವಡೆಗೆ ಮೂಲ ಅನ್ನುವ ಹಾಗೆ ದೊಡ್ಡವರ ಜಗಳ ನಮಗ್ಯಾಕಪ್ಪ ಎಂದು ಚಿಕ್ಕಮಗಳೂರಿನ ಎಪಿಎಂಸಿ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ಸಿಗರು ಚೆಡ್ಡಿ ದೋಸ್ತ್ ಗಳಾಗಿದ್ದಾರೆ. ಎಪಿಎಂಸಿಯ 16 ಸದಸ್ಯರಲ್ಲಿ ಬಿಜೆಪಿ ಎಂಟು, ಜೆಡಿಎಸ್ ಬೆಂಬಲಿತ ಕಾಂಗ್ರೆಸ್‍ನ ಎಂಟು ಸದಸ್ಯರಿದ್ದರು. ಹೀಗಿರುವಾಗ 16 ಸದಸ್ಯರು ಒಮ್ಮತದ ನಿರ್ಧಾರಕ್ಕೆ ಬಂದು ಹತ್ತು ತಿಂಗಳು ನಿಮಗೆ, ಉಳಿದ 10 ತಿಂಗಳು ನಮಗೆಂದು ಒಪ್ಪಂದ ಮಾಡಿಕೊಂಡಿದ್ದಾರೆ. ಮೊದಲ ಅವಧಿಗೆ ಕಾಂಗ್ರೆಸ್‍ನ ಪ್ರಕಾಶ್ ಅಧ್ಯಕ್ಷರಾದ್ರೆ, ಬಿಜೆಪಿಯ ಲೋಕೇಶ್ ಉಪಾಧ್ಯಕ್ಷರಾಗಿದ್ದಾರೆ. ಎರಡನೇ ಅವಧಿಗೆ ಬಿಜೆಪಿಯವ್ರು ಅಧ್ಯಕ್ಷರಾದ್ರೆ, ಜೆಡಿಎಸ್‍ನವ್ರು ಉಪಾಧ್ಯಕ್ಷ ಆಗಲಿದ್ದಾರೆ.
ಸ್ಥಳಿಯವಾಗಿ ನಿಮಗೆ ಅನುಕೂಲವಾಗುವಂತೆ ಒಪ್ಪಂದ ಮಾಡಿಕೊಳ್ಳಿ ಎಂದು ದೊಡ್ಡವರು ಸೂಚಿಸಿದ್ದಾರೆ. ಅಧಿಕಾರಕ್ಕಾಗಿ ಧರ್ಮಯುದ್ಧ ನಡೆಯುತ್ತಿರೋ ಈ ಕಾಲದಲ್ಲಿ ಮೂರು ಪಕ್ಷದ ಮೈತ್ರಿ ಆಶ್ಚರ್ಯ ತರೋದ್ರ ಜೊತೆ, ದೊಡ್ಡವರ ಕಿತ್ತಾಟ, ಕಚ್ಚಾಟದ ಬಗ್ಗೆ ಸಣ್ಣವರಿಗೆ ಬೇಸರವಿರಬಹುದೆ ಎಂಬ ಅನುಮಾನ ಹುಟ್ಟುಹಾಕಿದೆ.
ಒಟ್ಟಾರೆ, ಅಧಿಕಾರಕ್ಕಾಗಿ ಕಿತ್ತಾಡ್ತಿದ್ದೋರು, ರೈತರಿಗಾಗಿ ಒಂದಾಗಿದ್ದಾರೆ. ರೈತರಿಗಾಗಿ ಇದೇ ಮೈತ್ರಿ ರಾಜ್ಯಾದ್ಯಂತ ನಡೆದ್ರೆ ರಾಜ್ಯದ ರೈತರು ಪ್ರತಿ ದಿನ ಹಾಲು-ಅನ್ನ ಊಟ ಮಾಡೋದರಲ್ಲಿ ಅನುಮಾನವಿಲ್ಲ ಅನ್ನೋದು ಮಾತು. ಆದರೆ ದಿನಕ್ಕೊಂದು ರೂಪ ಪಡೆದುಕೊಳ್ತಿರೋ ಇಂದಿನ ರಾಜಕೀಯ ನಾಳೆ ಏನೋ? ನಾಡಿದ್ದು ಮತ್ತಿನ್ನೆನೋ? ಯಾರಿಗೆ ಗೊತ್ತು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv