ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ಅವನಲ್ಲ, ಅವಳು ಪ್ರಕರಣವೊಂದು ಪತ್ತೆಯಾಗಿದೆ. ಹುಡುಗನ ವೇಷ ಹಾಕಿಕೊಂಡು ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ಚಾಲಕಿ ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹುಡುಗರಂತೆ ಪ್ಯಾಂಟ್, ಶರ್ಟ್ ಮತ್ತು ಶೂ ಹಾಕಿಕೊಂಡು ಕಳ್ಳತನ ಮಾಡುತ್ತಿದ್ದು, ಕ್ಷಣಾರ್ಧದಲ್ಲಿ ಜೇಬಿಗೆ ಕತ್ತರಿ ಹಾಕಿ ಹಣ ಎಗರಿಸುತ್ತಿದ್ದಳು. ಅಪ್ರಾಪ್ತ ಬಾಲಕಿಯ ಕೈಚಳಕ ಕಂಡು ಸಾರ್ವಜನಿಕರು ಶಾಕ್ ಆಗಿದ್ದರು. ಬಾಲಕಿ ಕೈಯಲ್ಲಿ ಕವರ್ ಹಿಡಿದುಕೊಂಡು ಜೇಬಿಗೆ ಕತ್ತರಿ ಹಾಕುತ್ತಿದ್ದಳು.
ಬಾಲಕಿ ಮಾತ್ರವಲ್ಲದೇ ನಾಲ್ಕೈದು ಅಪ್ರಾಪ್ತರು, ಒಂದು ತಂಡ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದರು. ಎರಡು ದಿನಗಳ ಹಿಂದೆ ಬಾಲಕನೊಬ್ಬನ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಗುರುವಾರ ಜಗಳೂರು ಪಟ್ಟಣದ ಇಶಾನ್ ಬೇಕರಿಯಲ್ಲಿ ಬಾಲಕಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳತನಕ್ಕೆ ಹೊಂಚು ಹಾಕಿ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಸಾರ್ವಜನಿಕರು ಹಿಡಿದಿದ್ದು, ಬಳಿಕ ಅಪ್ರಾಪ್ತ ಬಾಲಕಿಯನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಬಾಲಕಿಯನ್ನು ವಿಚಾರಣೆ ಮಾಡುವ ವೇಳೆ ತಮ್ಮ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದ್ದಾಳೆ. ಹಾಸನ ಜಿಲ್ಲೆಯ ಅರಸೀಕೆರೆ, ಚಿಕ್ಕಬಳ್ಳಾಪುರ, ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಬಾಲಕಿ ವಿರುದ್ಧ ಪ್ರಕರಣ ದಾಖಲಾಗಿದ್ದವು. ಸದ್ಯಕ್ಕೆ ಜಗಳೂರಿನಲ್ಲಿ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಬಾಲಕಿಯನ್ನ ಅರಸೀಕೆರೆ ಠಾಣೆಗೆ ಒಪ್ಪಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv