ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಬಳಿ ರಾಜ್ಯ ಬಿಜೆಪಿ ನಾಯಕರು ರಾಷ್ಟ್ರೀಯ ನಾಯಕ ಅಂಕಿ-ಅಂಶಗಳನ್ನು ಕೊಡಿಸಿದರೆ ನಾನು ಅವರಿಗೆ ಆಭಾರಿಯಾಗಿರುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಬ್ಯಾಂಕುಗಳು ಪ್ರಧಾನಿ ನರೇಂದ್ರ ಮೋದಿಯವರ ಅಧೀನದಲ್ಲಿ ಬರುತ್ತವೆ. ಹೀಗಾಗಿ ರಾಜ್ಯ ಬಿಜೆಪಿ ನಾಯಕರು ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಬಳಿ ನಾವು ಹೇಳಿದ ಅಂಕಿ-ಅಂಶಗಳನ್ನು ಕೊಡಿಸಲಿ. ಒಂದು ವೇಳೆ ಬಿಜೆಪಿ ನಾಯಕರು ಅಂಕಿ-ಅಂಶ ಕೊಡಿಸಿದರೆ, ನಾನು ಬಿಜೆಪಿಯವರಿಗೆ ಆಭಾರಿಯಾಗಿರುತ್ತೇವೆ ಎಂದು ಹೇಳಿದರು.
ರೈತರ ಸಾಲಮನ್ನಾ ಕುರಿತು ಪ್ರತಿಕ್ರಿಯಿಸಿದ ಅವರು, ಸಾಲಮನ್ನಾಗೆ ಹಣ ಬಿಡುಗಡೆ ಮಾಡಲು ಸರ್ಕಾರದ ಬಳಿ ಹಣಕ್ಕೇನು ಕೊರತೆ ಇಲ್ಲ. ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ನೋಟಿಸ್‍ಗಳನ್ನು ನೀಡಿಲ್ಲ. ಕೇವಲ ತಿಳುವಳಿಕೆ ಪತ್ರವನ್ನು ಕೊಟ್ಟಿದ್ದಾರೆ. ಅಲ್ಲದೇ ರಾಷ್ಟ್ರೀಕೃತ ಬ್ಯಾಂಕುಗಳ ಜೊತೆ ನಮ್ಮ ಅಧಿಕಾರಿಗಳು ನಿತ್ಯ ಸಂಪರ್ಕದಲ್ಲಿದ್ದಾರೆ. ನವೆಂಬರ್ 1ರಂದು ಸಾಲಮನ್ನಾದ ಹಣವನ್ನು ರಿಲೀಸ್ ಮಾಡುತ್ತೇವೆ. ಈಗಾಗಲೇ 6,500 ಕೋಟಿ ರೂಪಾಯಿ ಹಣ ಸಿದ್ಧವಾಗಿದೆ ಎಂದು ತಿಳಿಸಿದರು.
ಬ್ಯಾಂಕಿನವರು ಮಾಹಿತಿ ಕೊಟ್ಟಿಲ್ಲ ಅಂದರೆ ಅದು ರಾಜಕಾರಣ ಅಂತಾನೇ ಅರ್ಥ. ಬಿಜೆಪಿಯವರಿಗೆ ರೈತರ ಹಣ ತೀರಿಸಲು ಆಗಿಲ್ಲ. ನಾನು ರೈತರ ಸಾಲವನ್ನು ತೀರಿಸುತ್ತೇನೆ. ಬಿಜೆಪಿ ನಾಯಕರು ಕೇಂದ್ರದವರ ಬಳಿ ಹೋಗಿ ಅಂಕಿ-ಅಂಶಗಳನ್ನು ತಂದು ಕೊಡಲಿ ಅಂತ ಟಾಂಗ್ ನೀಡಿದರು.
ಇದೇ ವೇಳೆ ಉಪ ಚುನಾವಣೆ ಅಭ್ಯರ್ಥಿ ವಿಚಾರದ ಬಗ್ಗೆ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತಾರೆ. ಸಾರಿಗೆ ಇಲಾಖೆ ಸಭೆ ಮುಂದೂಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಾರಿಗೆ ಇಲಾಖೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲ ಸರಿ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv