ಚೆನ್ನೈ: ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋ ಗಾದೆ ಇದೆ. ಆದ್ರೆ ಇಲ್ಲೊಬ್ಬ ಪತಿರಾಯ ತನ್ನ ಜೊತೆ ಸೆಕ್ಸ್‍ಗೆ ಒಪ್ಪುತ್ತಿಲ್ಲವೆಂದು ಸಿಟ್ಟುಗೊಂಡು ಮಲಗಿದ್ದ ಪತ್ನಿಯನ್ನೇ ಬರ್ಬರವಾಗಿ ಕೊಲೆಗೈದ ಘಟನೆ ತಮಿಳುನಾಡಿನ ತ್ರಿಚಿಯ ತಿರುವೆರಂಬುರ್ ಎಂಬಲ್ಲಿ ನಡೆದಿದೆ.
ಈ ಘಟನೆ ಭಾನುವಾರ ನಡೆದಿದ್ದು, 34 ವರ್ಷದ ವ್ಯಕ್ತಿ ತನ್ನ 26 ವರ್ಷದ ಪತ್ನಿಯ ಕತ್ತು ಹಿಸುಕಿ ಬರ್ಬರವಾಗಿ ಕೊಲೆಗೈದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಆರೋಪಿ ಪತಿ ಕಟ್ಟೂರಿನ ಡಿ ಶಂಕರ್ ಸಗಯರಾಜ್ ನನ್ನು ತಿರುವೆರಂಬುರ್ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಏನಿದು ಪ್ರಕರಣ?:
ಸಗಯರಾಜ್ ಹಾಗೂ ಜೆಸಿಂತಾ ಕಳೆದ ಜನವರಿ ತಿಂಗಳಲ್ಲಿ ಮದುವೆಯಾಗಿದ್ದರು. ಬಳಿಕ ಕೆಲ ವಾರಗಳ ನಂತರ ಇಬ್ಬರ ಮಧ್ಯೆ ಜಗಳಗಳು ಆರಂಭವಾಗಿತ್ತು. ಸಗಯರಾಜ್, ಇನ್ಶುರೆನ್ಸ್ ಕಂಪನಿಯೊಂದರಲ್ಲಿ ಏಜೆಂಟ್ ಆಗಿದ್ದು, ಕೆಲಸಕ್ಕೆ ಸರಿಯಾಗಿ ಹೋಗುತ್ತಿರಲಿಲ್ಲ. ಹೀಗಾಗಿ ಮೊದಲು ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು.
ಕೆಲ ತಿಂಗಳು ಕಳೆದ ಬಳಿಕ ಸಗಯರಾಜ್ ಪತ್ನಿಗೆ ಗೊತ್ತಿಲ್ಲದಂತೆ ಆಕೆಯ 2.5 ಪವನ್ ಚಿನ್ನವನ್ನು ಅಡವಿಟ್ಟಿದ್ದನು. ಕ್ರಮೇಣ ಈ ವಿಚಾರ ಜೆಸಿಂತಾರಿಗೆ ತಿಳಿಯುತ್ತಿದ್ದಂತೆ ಈ ಬಗ್ಗೆಯೂ ಇಬ್ಬರು ಕಿತ್ತಾಡಿಕೊಂಡರು.
ಪತಿಯ ನಡತೆಯ ಬಗ್ಗೆ ಬೇಸರಗೊಂಡ ಪತ್ನಿ ಜೆಸಿಂತಾ ತನ್ನ ತವರು ಮನೆಗೆ ವಾಪಸ್ಸಾಗಿದ್ದರು. ತವರು ಮನೆಗೆ ಹೋದ ಪತ್ನಿ ವಾಪಸ್ಸಾಗದಿದ್ದನ್ನು ಮನಗಂಡ ಸಗಯರಾಜ್, ಸೆ.30ರಂದು ತನ್ನ ಪೋಷಕರ ಜೊತೆ ಜೆಸಿಂತಾ ಮನೆಗೆ ಹೋಗಿದ್ದಾನೆ. ಅಲ್ಲದೇ ಆಕೆಯ ಹೆತ್ತವರ ಜೊತೆ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿ ಮಡದಿಯನ್ನು ವಾಪಸ್ ಕರೆದುಕೊಂಡು ಬಂದಿದ್ದಾನೆ.
ಆದ್ರೆ ಶನಿವಾರ ರಾತ್ರಿ ಸೆಕ್ಸ್ ವಿಚಾರವಾಗಿ ಮತ್ತೆ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ತನ್ನ ಜೊತೆ ಸೆಕ್ಸ್ ಮಾಡಲು ಯಾಕೆ ಒಪ್ಪುತ್ತಿಲ್ಲವೆಂದು ಪತಿ, ಪತ್ನಿ ಜೊತೆ ಜಗಳ ಶುರು ಮಾಡಿದ್ದಾನೆ. ಈ ಗಲಾಟೆಯ ಬಳಿಕ ಜೆಸಿಂತಾ ನಿದ್ದೆಗೆ ಜಾರಿದ್ದರು. ಆದ್ರೆ ಪತಿರಾಯ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಅಂತ ತಿರುವೆರಂಬುರ್ ಪೊಲೀಸ್ ಇನ್ಸ್ ಪೆಕ್ಟರ್ ಜ್ಞಾನವೇಲನ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv