ಬೆಂಗಳೂರು: ಕರ್ನಾಟಕದ ಎರಡು ವಿಧಾನಸಭೆ ಮತ್ತು ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ಕಾಂಗ್ರೆಸ್ಸಿಗೆ ವಿಟಮಿನ್ ‘ಎಂ’ ಸಮಸ್ಯೆ ಎದುರಾಗಿದೆ.
ಕಾಂಗ್ರೆಸ್ ಒಲ್ಲದ ಮನಸ್ಸಿನಿಂದ ಉಪ ಚುನಾವಣೆಗೆ ಸಿದ್ಧಗೊಂಡಿದ್ದು, ಎಲೆಕ್ಷನ್ ನೇತೃತ್ವವನ್ನು ಯಾರು ತೆಗೆದುಕೊಳ್ಳಬೇಕೆಂದು ಎಂಬುದರ ಬಗ್ಗೆ ಕೈ ನಾಯಕರಿಗೆ ಗೊಂದಲ ಉಂಟಾಗಿದೆ. ವೇದಿಕೆ ಮೇಲೆ ಮಾತ್ರ ಕೈ ಬೀಸಲು ಕಾಂಗ್ರೆಸ್ಸಲ್ಲಿ ಡಜನ್‍ಗಟ್ಟಲೇ ನಾಯಕರು ಇದ್ದಾರೆ. ಆದರೆ ಚುನಾವಣೆ ಮುನ್ನೆಡಲು ಯಾವ ನಾಯಕರೂ ಕೂಡ ಸಿದ್ಧರಿಲ್ಲ. ಉಪ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಮತ್ತು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ಸಿನ ಈ ಮನಸ್ಥಿತಿಗೆ ವಿಟಮಿನ್ ‘ಎಂ’ ಕಾರಣ ಎಂದು ಮಾತು ಕೇಳಿ ಬರುತ್ತಿದೆ. ವಿಟಮಿನ್ ‘ಎಂ’ ಎಂದರೆ ಹಣದ ಕೊರತೆ. ಸಮ್ಮಿಶ್ರ ಸರ್ಕಾರವಿದ್ದರೂ ಕಾಂಗ್ರೆಸ್ಸಲ್ಲಿ ಹಣದ ಕೊರತೆ ಉಂಟಾಗಿದೆ. ಆದ್ದರಿಂದ ಉಪ ಚುನಾವಣೆಗೆ ಕಾಂಗ್ರೆಸ್ಸಲ್ಲಿ ದುಡ್ಡೇ ಇಲ್ಲ. ಯಾರೂ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿಲ್ಲ ಅಂತ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಇತ್ತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪರಮೇಶ್ವರ್ ಬಳಿ ಬಹಿರಂಗವಾಗಿ ಚುನಾವಣೆಗೆ ಹಣ ಇಲ್ಲ, ಯಾರನ್ನಾ ಕೇಳುವುದು ಬಿಡುವುದು ಎಂದು ಹೇಳಿದ್ದಾರಂತೆ. ನನ್ನಲ್ಲಿ ಅಧಿಕಾರವಿಲ್ಲ, ನಾನೇನು ಮಾಡಲಿ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಾರಂತೆ. ಸಚಿವ ಡಿ.ಕೆ. ಶಿವಕುಮಾರ್ ಅವರು ಐಟಿ ಮತ್ತು ಇಡಿ ದಾಳಿಯಿಂದ ನನ್ನ ಬಳಿಯೂ ಹಣವಿಲ್ಲ ಎಂದು ಹೇಳಿದ್ದಾರಂತೆ. ಪರಮೇಶ್ವರ್ ಅವರು, ಅಯ್ಯೋ ಸರ್ಕಾರ ಮಟ್ಟದಲ್ಲಿ ಏನೂ ಆಗುತ್ತಿಲ್ಲ ಅಂತಿದ್ದಾರೆ. ಇತ್ತ ಸಚಿವರು ನಮ್ಮ ಕೆಲಸವೇ ಆಗುತ್ತಿಲ್ಲ. ದುಡ್ಡು ಎಲ್ಲಿಂದ ತರೋಣ ಎಂದು ಹೇಳುತ್ತಿದ್ದಾರೆ.
ಬಳ್ಳಾರಿ, ಮಂಡ್ಯ, ಶಿವಮೊಗ್ಗ, ಜಮಖಂಡಿ ಮತ್ತು ರಾಮನಗರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಉಪ ಕದನವನ್ನ 2019ರ ಲೋಕಸಭಾ ಚುನಾವಣೆ ದಿಕ್ಸೂಚಿ ಎಂದೇ ಹೇಳಲಾಗುತ್ತಿದ್ದು, ಬಿಜೆಪಿ ಗೆಲುವು ಅಗತ್ಯವಾಗಿದೆ. ಇತ್ತ ಮೈತ್ರಿ ಸರ್ಕಾರದ ರಚನೆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಗೂ ಮೊದಲ ಉಪ ಚುನಾವಣೆಯ ಹಿಡಿತ ಸಾಧಿಸಲು ರಣತಂತ್ರ ರೂಪಿಸುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv