ಮಂಡ್ಯ: ಪ್ರೀತಿಸಿ ಮದುವೆಯಾದ್ದರಿಂದ ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಯುವ ಜೋಡಿಯೊಂದು ನ್ಯಾಯ ಕೊಡಿಸುವಂತೆ ಪೊಲೀಸರ ಮೊರೆ ಹೋಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಸ್ಫೂರ್ತಿ ಮತ್ತು ಮನು ಎಂಬ ಯುವ ಜೋಡಿಯೇ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಯುವ ಜೋಡಿ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ರಾಜೀವ್‍ಗಾಂಧಿ ನಗರದ ಮನು ಮತ್ತು ನಗುವನಹಳ್ಳಿ ಕಾಲೋನಿಯ ನಿವಾಸಿ ಸ್ಫೂರ್ತಿ ಇಬ್ಬರು ಒಂದೇ ಕುಲದವರಾಗಿದ್ದು ಕಳೆದ ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಈ ವಿಷಯ ತಿಳಿದ ಹುಡುಗಿಯ ಗ್ರಾಮದ ಕೆಲವರು ಪ್ರೀತಿಸಿ ಮದುವೆಯಾಗುವುದು ನಮ್ಮ ಕುಲಕ್ಕೆ ಅವಮಾನ. ಹೀಗಾಗಿ ಇಬ್ಬರೂ 60 ಸಾವಿರ ತಪ್ಪು ಕಾಣಿಕೆ ಕಟ್ಟಿ ಮದುವೆಯಾಗಿ ಎಂದು ಕಳೆದೊಂದು ತಿಂಗಳ ಹಿಂದೆ ನ್ಯಾಯ ಪಂಚಾಯಿತಿ ಮಾಡಿದ್ದಾರೆ.
ದಂಡ ಕಟ್ಟಲು ಒಪ್ಪದ ಯುವ ಜೋಡಿ ಎಂಟು ದಿನಗಳ ಹಿಂದೆ ಮದುವೆಯಾಗಿದ್ದಾರೆ. ಇದರಿಂದ ಯುವತಿಯ ಗ್ರಾಮದಲ್ಲಿ ಯುವ ಜೋಡಿಗೆ ಮತ್ತು ಅವರ ಕುಟುಂಬದವರಿಗೆ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ನೊಂದ ಯುವ ಜೋಡಿ ನಾವು ನಮ್ಮಿಬ್ಬರ ಕುಟುಂಬದವರ ಒಪ್ಪಿಗೆ ಪಡೆದೇ ಮದುವೆಯಾಗಿದ್ದೇವೆ. ಇದರಲ್ಲೇನು ತಪ್ಪಿದೆ. ನಮಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸರ ಮೊರೆ ಹೋದರೂ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಯುವ ಜೋಡಿ ಆರೋಪಿಸುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv