ಮಂಡ್ಯ: ಸಿನಿಮಾ ನಟರು ಸಮಾಜಕ್ಕೆ ರೋಲ್ ಮಾಡೆಲ್ ಗಳಾಗಿರಬೇಕು. ಇದನ್ನೇ ನಾನು ಎಲ್ಲ ನಟರಿಗೂ ತಿಳಿ ಹೇಳಿದ್ದೇನೆ ಎಂದು ರೆಬೆಲ್ ಸ್ಟಾರ್ ಅಂಬರೀಶ್ ಹೇಳಿದ್ದಾರೆ.
ಕಳೆದ ಮೂರು ದಿನಗಳ ಮಂಡ್ಯ ಗುತ್ತಲು ರಸ್ತೆ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟ ಅಭಿಮಾನಿ ಮನೆಗೆ ಭೇಟಿ ನೀಡಿದ್ದ ಅಂಬರೀಶ್ ಮೃತ ಅಭಿಮಾನಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಸ್ಯಾಂಡಲ್‍ವುಡ್ ನಟರ ವಿವಾದ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಈ ಕುರಿತು ನ್ಯಾಯಮೂರ್ತಿಗಳು ಕೂಡ ಎಚ್ಚರಿಕೆ ನೀಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿರುವ ನೀವು ಮಾದರಿ ವ್ಯಕ್ತಿಗಳಾಗಿ, ಬೇರೆಯಾವರಿಗೆ ರೋಲ್ ಮಾಡೆಲ್‍ಗಳಾಗಬೇಕು. ನಿಮ್ಮನ್ನ ನೋಡಿ ಎಲ್ಲರೂ ಕಲಿಯಬೇಕು. ನಾನು ಕೂಡ ಹಲವು ಬಾರಿ ಈ ಮಾತು ಹೇಳಿದ್ದೇನೆ ಎಂದರು.
ಕೆಲವೊಮ್ಮೆ ಇಂತಹ ಘಟನೆಗಳು ಮಾಡಬೇಕು ಎಂದು ಮಾಡುತ್ತಾರೋ ಅಥವಾ ಸಂದರ್ಭ ಹಾಗೆ ಮಾಡಿಸುತ್ತೋ ಗೊತ್ತಿಲ್ಲ. ಅವರೆಲ್ಲಾ ನಮಗಿಂತ ಕಿರಿಯರು, ನನಗೂ ಗೌರವ ಕೊಡುತ್ತಾರೆ. ಹೀಗಾಗಿ ತಿಳಿ ಹೇಳಿದ್ದೇನೆ. ಆದರೆ ಕೆಲವು ಸಲ ಏನೂ ಮಾಡಲು ಸಾಧ್ಯವಿಲ್ಲ, ಅವರ ವೈಯಕ್ತಿಕ ಜೀವನಕ್ಕೆ ಬಿಟ್ಟಿದ್ದು, ನಾನಂತೂ ಹೇಳುವುದನ್ನು ಹೇಳುತ್ತೇನೆ. ನಾವು ಕೂಡ ಹಿರಿಯರನ್ನು ನೋಡಿಕೊಂಡು ಜೀವನ ಮಾಡಿದ್ದೇವೆ. ಅದು ರಾಜಕೀಯ ಅಥವಾ ಸಿನಿಮಾ ಆದರೂ ಹಿರಿಯರನ್ನ ನೋಡಿಕೊಂಡು ಬೆಳೆದಿದ್ದೇವೆ ಎಂದು ಸಲಹೆ ನೀಡಿದರು.
ಇದೇ ವೇಳೆ ರಾಜ್ಯ ರಾಜಕಾರಣದ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದರು. ಕುಮಾರಸ್ವಾಮಿಗೆ ಕಾಂಗ್ರೆಸ್ ಅಲ್ಲ, ಕಾಂಗ್ರೆಸ್ಸಿಗೆ ಕುಮಾರಸ್ವಾಮಿ ಬೇಕು. ಚುನಾವಣೆಯಿಂದ ದೂರ ಇದ್ದರೂ, ನಾನು ರಾಜಕೀಯದಲ್ಲಿ ಇದ್ದೇ ಇರುತ್ತೇನೆ ಎಂದು ಕುಮಾರಸ್ವಾಮಿ ನೇತೃತ್ವದ ಸರ್ಕಾರ ರೈತರ ಪರ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಕಾಂಗ್ರೆಸ್ಸಿನವರು ಕುಮಾರಸ್ವಾಮಿಗೆ ಆಡಳಿತ ನಡೆಸಲು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದರು. ಇದನ್ನೂ ಓದಿ: ಅಭಿಮಾನಿಯನ್ನು ನೆನೆದು ಭಾವುಕರಾದ ಅಂಬಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv