ವಾಟ್ಸಪ್ ಯೂ ಟರ್ನ್ – ಇನ್ನು ಮುಂದೆ ಬರುತ್ತೆ ಜಾಹೀರಾತು!

Public TV
2 Min Read
whatsapp promo

ಕ್ಯಾಲಿಫೋರ್ನಿಯಾ: ಯಾವುದೇ ಕಾರಣಕ್ಕೂ ಜಾಹೀರಾತು ಪ್ರಕಟಿಸುವುದಿಲ್ಲ ಎಂದು ಹೇಳಿದ್ದ ವಾಟ್ಸಪ್ ಈಗ ತನ್ನ ಈ ನಿರ್ಧಾರದಲ್ಲಿ ಯೂ ಟರ್ನ್ ಹೊಡೆಯುವ ಸಾಧ್ಯತೆಯಿದೆ.

ಹೌದು, ಫೇಸ್ ಬುಕ್ ಮಾಲೀಕತ್ವದ ವಾಟ್ಸಪ್ ನಲ್ಲಿ ಇನ್ನು ಮುಂದೆ ಜಾಹೀರಾತು ಪ್ರಕಟಗೊಳ್ಳಲಿದೆ. ಪ್ರಸ್ತುತ ವಾಟ್ಸಪ್ ಬಳಕೆದಾರರ ಪೈಕಿ ಶೇ.50 ರಷ್ಟು ಬಳಕೆದಾರರು ಸ್ಟೇಟಸ್ ಅಪ್‍ಡೇಟ್ ಮಾಡುತ್ತಿದ್ದಾರೆ. ಈ ಸ್ಟೇಟಸ್ ಅಪ್‍ಡೇಟ್ ಮಾಡುವ ಜಾಗದಲ್ಲೇ ಜಾಹೀರಾತನ್ನು ಪ್ರಕಟಿಸಲು ವಾಟ್ಸಪ್ ಸಿದ್ಧತೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ.

ಇಲ್ಲಿಯವರೆಗೆ ವಾಟ್ಸಪ್ ನಲ್ಲಿ ಖಾತೆ ತೆರೆಯಲು ಫೋನ್ ನಂಬರ್ ಇದ್ದರೆ ಸಾಕಿತ್ತು. ವರ್ಷ, ಇಮೇಲ್, ಆಸಕ್ತಿ ವಿಚಾರಗಳನ್ನು ಕೇಳುತ್ತಿರಲಿಲ್ಲ. ಆದರೆ ಈಗ ಜಾಹೀರಾತು ಪ್ರಕಟಿಸಲು ಮುಂದಾಗಿದ್ದು, ಯಾವ ರೀತಿ ಬಳಕೆದಾರರ ಡೇಟಾ ಪಡೆದು ಜಾಹೀರಾತು ಪ್ರಕಟಿಸುತ್ತದೆ ಎನ್ನುವ ಪ್ರಶ್ನೆ ಎದ್ದಿದೆ.

whatsapp add

ಫೇಸ್ ಬುಕ್ ನಲ್ಲಿ ಬಳಕೆದಾರರ ಆಸಕ್ತಿಯನ್ನು ನೋಡಿಕೊಂಡು ಜಾಹೀರಾತುಗಳು ಅವರ ವಾಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ವಾಟ್ಸಪ್ ಬಳಕೆದಾರ ಈ ವಿಚಾರದ ಬಗ್ಗೆಯೇ ಆಸಕ್ತಿ ಹೊಂದಿದ್ದಾನೆ ಎನ್ನುವುದನ್ನು ತಿಳಿಯಲು ಸಾಧ್ಯವಿಲ್ಲ. ಹೀಗಾಗಿ ಜಿಪಿಎಸ್ ಮಾಹಿತಿಯನ್ನು ಆಧಾರಿಸಿ ಅಥವಾ ಫೋನ್ ನಂಬರ್ ಯಾವ ರಾಜ್ಯದ ವ್ಯಾಪ್ತಿಗೆ ಬರುತ್ತದೋ ಆ ಮಾಹಿತಿಯನ್ನು ಆಧಾರಿಸಿ ಜಾಹೀರಾತು ಪ್ರಕಟಿಸುತ್ತಾ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ.

ಫೇಸ್‍ಬುಕ್ ಈಗಾಗಲೇ ಒಂದೊಂದೆ ಆದಾಯದ ಮೂಲಗಳನ್ನು ಹುಡುಕುತ್ತಿದೆ. ಇನ್ ಸ್ಟಾಗ್ರಾಮ್ ನಲ್ಲಿ ಜಾಹೀರಾತು ಪ್ರಕಟಿಸುತ್ತಿದೆ. ಇದರ ಜೊತೆಯಲ್ಲಿ ಮೆಸೇಂಜಿಂಗ್ ಅಪ್ಲಿಕೇಶನ್ ಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ವಾಟ್ಸಪ್ ನಲ್ಲೂ ಆದಾಯ ಮಾಡಲು ಸಿದ್ಧತೆ ನಡೆಸುತ್ತಿದ್ದು, ಮುಂದಿನ ವಾಟ್ಸಪ್ ಅಪ್‍ಡೇಟ್ ನಲ್ಲಿ ಈ ವಿಶೇಷತೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಈ ಹಿಂದೆ ವಾಟ್ಸಪ್ ತನ್ನ ಬ್ಲಾಗಿನಲ್ಲಿ ನಾವು ಯಾವುದೇ ಕಾರಣಕ್ಕೂ ಜಾಹೀರಾತನ್ನು ಪ್ರಕಟಿಸುವುದಿಲ್ಲ ಎಂದು ಹೇಳಿತ್ತು.

ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಕಂಪೆನಿ ಗ್ರಾಹಕರ ಅನುಮತಿ ಪಡೆಯದೇ ಅವರ ಡೇಟಾವನ್ನು ಫೇಸ್‍ಬುಕ್ ನಲ್ಲಿ ಬಳಕೆ ಮಾಡುತ್ತಿದೆ ಎಂದು ಈ ಹಿಂದೆ ಯುರೋಪಿಯನ್ ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಶನ್ ಆರೋಪಿಸಿತ್ತು. ಈ ಆರೋಪಕ್ಕೆ ತನ್ನ ಬ್ಲಾಗ್ ನಲ್ಲಿ ಪ್ರತಿಕ್ರಿಯಿಸಿರುವ ವಾಟ್ಸಪ್ ಗ್ರಾಹಕರ ಯಾವುದೇ ಮಾಹಿತಿಯನ್ನು ನಾವು ಫೇಸ್‍ಬುಕ್ ನಲ್ಲಿ ಬಳಕೆ ಮಾಡುತ್ತಿಲ್ಲ. ಅಷ್ಟೇ ಅಲ್ಲದೇ ಸ್ಪಾಮ್ ಮೆಸೇಜ್ ಕಳುಹಿಸುವುದಿಲ್ಲ ಎಂದು ತಿಳಿಸಿತ್ತು.

whatsapp blog 1

Share This Article
Leave a Comment

Leave a Reply

Your email address will not be published. Required fields are marked *