ಗಡಿಯಲ್ಲಿ ನುಸುಳಿದ್ರೆ ನಾವು ಪ್ರತ್ಯುತ್ತರ ಕೊಡದೇ ಬಿಡಲ್ಲ: ನಿರ್ಮಲ ಸೀತಾರಾಮನ್

Public TV
3 Min Read
NIRMALA SEETHARAMAN

ಬೆಂಗಳೂರು: ಗಡಿಯಲ್ಲಿ ಅಕ್ರಮವಾಗಿ ನುಸಳಿ ದಾಳಿಗೆ ಮುಂದಾದರೆ, ನಾವು ಪ್ರತ್ಯುತ್ತರ ನೀಡದೇ ಬಿಡುವುದಿಲ್ಲವೆಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಎಚ್ಚರಿಕೆ ನೀಡಿದ್ದಾರೆ.

ಯಲಹಂಕ ವಾಯುನೆಲೆಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಪಾಕಿಸ್ತಾನ ಗಡಿಯನ್ನು ಉಲ್ಲಂಘಿಸಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳಿಂದ ನನಗೆ ಈ ವಿಚಾರ ಗೊತ್ತಾಗಿದೆ. ನನಗೆ ಹೆಚ್ಚಿನ ಮಾಹಿತಿ ಬಂದ ನಂತರ ಇದರ ಬಗ್ಗೆ ಮಾತನಾಡುತ್ತೇನೆ. ಅಲ್ಲದೇ ಗಡಿಯಲ್ಲಿ ಅಕ್ರಮವಾಗಿ ನುಸುಳಿ ದಾಳಿಗೆ ಮುಂದಾದರೇ, ನಾವು ಪ್ರತ್ಯುತ್ತರ ಕೊಡದೇ ಬಿಡುವುದಿಲ್ಲ ಎಂದು ಹೇಳಿದರು.

ಸರ್ಜಿಕಲ್ ಸ್ಟ್ರೈಕ್ ಎರಡನೇ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಭಾನುವಾರ ದೇಶದ 53 ಸ್ಥಳಗಲ್ಲಿ `ಪರಾಕ್ರಮ್ ಪಥ್’ ದಿವಸ್ ಆಚರಣೆ ಮಾಡಲಾಗಿದೆ. ಸರ್ಜಿಕಲ್ ಸ್ಟ್ರೈಕ್ ಸ್ಮರಿಸುವುದು ಮತ್ತು ಆಚರಿಸುವುದು ಅತ್ಯವಶ್ಯಕವಾಗಿದೆ. ಉಗ್ರರು ನಮ್ಮ ದೇಶಕ್ಕೆ ನುಸುಳಿ ದಾಳಿ ಮಾಡಿದ್ದರು. ಇದರ ಪ್ರತಿಕಾರವಾಗಿ ನಮ್ಮ ಸೈನಿಕರು 2016ರ ಸೆಪ್ಟೆಂಬರ್ 28ರ ಮಧ್ಯರಾತ್ರಿ ಉಗ್ರರ ಅಡುಗುತಾಣಗಳ ಮೇಲೆ ದಾಳಿ ನಡೆಸಿದ್ದರು. ಹೀಗಾಗಿ ಈ ದಿನವನ್ನು ಉಗ್ರರಿಗೆ ಕೊಟ್ಟ ಎಚ್ಚರಿಕೆಯ ಸಂದೇಶವನ್ನಾಗಿ ಪರಾಕ್ರಮ್ ಪರ್ವ ದಿನವನ್ನು ಆಚರಿಸಿದ್ದೇವೆ ಎನ್ನುವ ಮೂಲಕ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿಲ್ಲ. ಅದು ರಾಜಕಾರಣದ ಆಟವಲ್ಲ. ಆದರೆ ಇದನ್ನು ರಾಜಕೀಯವಾಗಿ ಬಳಸುತ್ತಿರುವುದು ನಾಚಿಕೆಗೇಡು. ಮತ್ತೆ ಮತ್ತೆ ನಮ್ಮ ಗಡಿಯಲ್ಲಿ ದಾಳಿ ಮಾಡಿದ್ರೆ ನಾವು ಸುಮ್ಮನೇ ಕೂರುವುದಿಲ್ಲ ಎಂದರು.

ಏರ್ ಶೋ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಎಲ್ಲರಿಗೂ ಏರೋ ಇಂಡಿಯಾ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಆದರೆ ಕೆಲ ರಾಜ್ಯದವರು ಸಹ ನಮ್ಮಲ್ಲಿಯೂ ಏರೋ ಇಂಡಿಯಾ ನಡೆಸಿ ಎಂದು ಕೇಳುತ್ತಿದ್ದಾರೆ. ಉತ್ತರ ಪ್ರದೇಶದವರೂ ನಮ್ಮಲ್ಲಿಯೂ ಎಚ್‍ಎಎಲ್ ಇದೆ, ಇಲ್ಲೂ ಏರೋ ಇಂಡಿಯಾ ಶೋ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಯಾವುದೇ ರಾಜ್ಯದವರು ಕೇಳಬಾರದು ಅಂತಾ ಏನು ಇಲ್ಲ. ಅವರು ಹಾಗೆಯೇ ಕೇಳಿದ್ದರು. ಈ ಬಾರಿ ಏರ್ ಶೋದಲ್ಲಿ ರಫೇಲ್ ವಿಮಾನ ಹಾರಾಟ ಮಾಡುವುದಿಲ್ಲ. ರಫೇಲ್ ಇನ್ನೂ ನಿರ್ಮಾಣದ ಹಂತದಲ್ಲಿದೆ. ಏರ್ ಷೋ ಉದ್ಘಾಟನೆಗೆ ಅತಿಥಿಗಳನ್ನು ಇನ್ನೂ ನಿರ್ಧರಿಸಿಲ್ಲ ಎಂದು ತಿಳಿಸಿದರು.

rafale

ಹೆಚ್‍ಎಎಲ್ ಸಿಬ್ಬಂದಿ ಕಡಿತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಈ ಮೊದಲು ಎಚ್‍ಎಎಲ್ ಜೊತೆ ಒಪ್ಪಂದ ಮಾಡಿಕೊಂಡಿತ್ತಾ? ಏಕಾಏಕಿ ಎನ್‍ಡಿಎ ಅಧಿಕಾರಿ ಬಂದ ಕೂಡಲೇ, ನಮ್ಮ ಸರ್ಕಾರ ರಫೇಲ್ ಡೀಲ್ ಕೊಟ್ಟಿದೆ ಎಂದು ಬೊಬ್ಬೆ ಹೊಡೆಯುತ್ತಿದೆ. ಆದರೆ ಇಲ್ಲಿಯ ತನಕ ಒಂದೇ ಒಂದು ಒಡಂಬಡಿಕೆಯ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಈಗ ರಫೇಲ್ ಡಸಾಲ್ಟ್ ಡೀಲ್ ಮಾಡಿರುವುದರಿಂದ 20 ರಿಂದ 30 ಸಾವಿರ ಎಚ್‍ಎಎಲ್ ಉದ್ಯೋಗಳನ್ನು ಕಸಿದುಕೊಂಡಿದೆ ಎಂದು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಎಚ್‍ಎಎಲ್ ಪ್ರಕರಣಕ್ಕೆ ಮೊಸಳೆ ಕಣ್ಣಿರು ಹಾಕುತ್ತಿದ್ದಾರೆ. ಎಚ್‍ಎಎಲ್‍ಗೆ ಅವರು ಏನು ಮಾಡಿದ್ದಾರೆ ಎನ್ನುವುದನ್ನು ಅವರೇ ಬಂದು ಹೇಳಲಿ ಪ್ರಶ್ನಿಸಿದರು.

bbmp bangalore

ಬಿಬಿಎಂಪಿ ಮೆಯರ್ ಚುನಾವಣೆಗೆ ಗೈರಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿ ಮೇಯರ್ ಚುನಾವಣೆಯ ದಿನದಂದೇ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೈನಿಕರೊಡನೆ ಪೂರ್ವ ನಿಗದಿಯಾದ ಕಾರ್ಯಕ್ರಮದಂತೆ ಸಂವಾದ ನಡೆಸುತ್ತಿದ್ದರು. ಶಿಷ್ಟಾಚಾರದ ಪ್ರಕಾರ ಕೇಂದ್ರ ರಕ್ಷಣಾ ಸಚಿವೆಯಾಗಿ ನನ್ನ ಉಪಸ್ಥಿತಿ ಅನಿವಾರ್ಯವಾಗಿತ್ತು. ಹೀಗಾಗಿ ನಾನು ಬರಲು ಸಾಧ್ಯವಾಗುವುದಿಲ್ಲವೆಂದು ಮೊದಲೇ ಎಲ್ಲರಿಗೂ ತಿಳಿಸಿದ್ದೆ. ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಲು ನಾನು ಕಾರಣವಲ್ಲ. ಒಂದು ವೇಳೆ ನಾನೇ ಸೋಲಿಗೆ ಕಾರಣ ಎಂದು ಆರೋಪ ಮಾಡಿದ್ದರೆ ಅವರ ಬಳಿ ನಾನೇ ಮಾತನಾಡುತ್ತೇನೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *