ಹುಬ್ಬಳ್ಳಿ: ಬಿಜೆಪಿ ಮುಖಂಡನೋರ್ವ ಜಮೀನು ತನ್ನ ಕೈ ತಪ್ಪಿದ್ದಕ್ಕೆ ಬೆಳೆ ನಾಶ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ನಡೆದಿದೆ.
ದೇವರಾಜ ದಾನಪ್ಪ ಪಾಯಕನವರ್ ಎಂಬಾತನೇ ಬೆಳೆ ನಾಶ ಮಾಡಿದ ಬಿಜೆಪಿ ಮುಖಂಡ. ಕುಂದಗೋಳ ಪಟ್ಟಣದ ನಿವಾಸಿಯಾದ ಯಮನಪ್ಪ ಪಾಯಕನವರಿಗೆ ಸೇರಿದ 7 ಎಕರೆ 6 ಗುಂಟೆ ಜಮೀನನ್ನು ದೇವರಾಜ್ ತನ್ನ ಪ್ರಭಾವ ಬಳಸಿ ಉಳುಮೆ ಮಾಡಿಕೊಂಡಿದ್ದನು. ಈ ಸಂಬಂಧ ಯಮನಪ್ಪ ಅವರು 2016ರಲ್ಲಿ ಜಮೀನು ತಮ್ಮದು ಎಂದು ನ್ಯಾಯಾಲಯ ಮೊರೆ ಹೋಗಿದ್ದರು.
ಅರ್ಜಿಯನ್ನು ವಿಚಾರಣೆ ನಡೆಸಿದ ಧಾರವಾಡ ಜಿಲ್ಲಾ ಸಿವಿಲ್ ಕೋರ್ಟ್ ಜಮೀನು ಯಮನಪ್ಪರಿಗೆ ಸೇರಬೇಕೆಂದು ತೀರ್ಪು ನೀಡಿತ್ತು. ತೀರ್ಪು ತನ್ನ ಬರದಕ್ಕೆ ಕೋಪಗೊಂಡ ದೇವರಾಜ ಮತ್ತು ಮಕ್ಕಳಾದ ಅನಿಲ್, ಆನಂದ್, ಸುನೀಲ್ ಸೇರಿಕೊಂಡು ಹತ್ತಿ, ಮೆಣಸಿನಕಾಯಿ, ಟೊಮೋಟೋ ಬೆಳೆಗೆ ಕಳೆನಾಶಕ ಸಿಂಪಡಿಸಿ ನಾಶ ಮಾಡಿದ್ದಾರೆ. ಈ ತಂದೆ ಮಕ್ಕಳ ಕೃತ್ಯ ಇದೇ ಮೊದಲಲ್ಲ. ಕಳೆದ ವರ್ಷವೂ ಇದೇ ಜಮೀನಿನಲ್ಲಿ ಬೆಳೆದ ಹೆಸರು ಬೆಳೆಗೆ ಬೆಂಕಿ ಹಚ್ಚಿದ್ದರು. ಇದರಿಂದ ಲಕ್ಷಾಂತರ ರೂಪಾಯಿ ಬೆಳೆ ನಾಶ ಆಗಿತ್ತು ಎಂದು ನೊಂದ ರೈತರು ಹೇಳುತ್ತಾರೆ.
ತನ್ನ ಪ್ರಭಾವ ಬಳಸಿಕೊಂಡು ಇಷ್ಟು ದಿನ ಉಳುಮೆ ಮಾಡುತ್ತಿದ್ದ ತನ್ನದಲ್ಲದ ಜಮೀನು ಕೈ ತಪ್ಪಿದ್ದಕ್ಕೆ ತಂದೆ ಮಕ್ಕಳು ಕಟಾವಿಗೆ ಬಂದಿದ್ದ ಬೆಳೆ ನಾಶ ಮಾಡಿದ್ದಾರೆ. ಸದ್ಯ ಕೃತ್ಯದ ವಿರುದ್ಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv