ಲಕ್ನೋ: 20 ವರ್ಷದ ಯುವತಿಗೆ ಮತ್ತು ಬರುವ ಔಷಧಿ ಕುಡಿಸಿ, ಚಲಿಸುತ್ತಿದ್ದ ಕಾರಿನಲ್ಲಿಯೇ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಈ ಘಟನೆ ಕಾನ್ಪುರದ ಸಾಚೆಂದಿ ಪ್ರದೇಶದಲ್ಲಿ ನಡೆದಿದ್ದು, ಮಂಗಳವಾರ ರಾತ್ರಿ ಈ ಕುರಿತು ಸಂತ್ರಸ್ತೆಯ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರು ನೀಡಿದ ದೂರಿನನ್ವಯ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಏನಿದು ಪ್ರಕರಣ?
ಸೆಪ್ಟೆಂಬರ್ 20 ರಂದು ನಮ್ಮ ಮಗಳು ಅದೇ ಗ್ರಾಮದ ಇನ್ನೊಬ್ಬ ಮಹಿಳೆಯ ಜೊತೆ ಹಬ್ಬಕ್ಕೆ ಹೋಗಿದ್ದಳು. ಆದರೆ ಸಂಜೆಯಾದ್ರು ಮನೆಗೆ ಹಿಂದಿರುಗಿ ಬರಲಿಲ್ಲ. ನಂತರ ನಾವು ಎಲ್ಲ ಕಡೆ ಹುಡುಕಾಡಿ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ಕೊಟ್ಟಿದ್ದೇವು. ಆದರೆ ಸೆಪ್ಟೆಂಬರ್ 21 ರಂದು ನಮ್ಮ ಮನೆಯ ಹಿಂಭಾಗ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಬಿದ್ದಿದ್ದಳು ಎಂದು ಪೋಷಕರು ಹೇಳಿದ್ದಾರೆ.
ಕೂಡಲೇ ಸಂತ್ರಸ್ತೆಯನ್ನು ಲಾಲ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಜ್ಞೆ ಬಂದ ಬಳಿಕ ಸಂತ್ರಸ್ತೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾಳೆ ಎಂದು ಸೆಚೆಂದಿ ಪೊಲೀಸ್ ಅಧಿಕಾರಿ ರಾಘವೇಂದ್ರ ಸಿಂಗ್ ಹೇಳಿದ್ದಾರೆ.
ಸಂತ್ರಸ್ತೆ ಹಬ್ಬ ಮುಗಿಸಿಕೊಂಡು ಹಿಂದಿರುಗಿ ಬರಲು ಕಾರಿಗಾಗಿ ಕಾಯುತ್ತಿದ್ದಳು. ಈ ವೇಳೆ ನಾಲ್ವರು ಮಂದಿ ಬಂದು ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಬಳಿಕ ಬಲವಂತವಾಗಿ ಮತ್ತು ಬರುವ ಔಷಧಿಯನ್ನು ಕುಡಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರದ ಬಳಿಕ ಸಂತ್ರಸ್ತೆಯನ್ನು ಆಕೆಯ ಮನೆಯ ಹಿಂಭಾಗದಲ್ಲಿಯೇ ತಳ್ಳಿ ಹೋಗಿದ್ದಾರೆ. ಇದೇ ವೇಳೆ ನಡೆದ ವಿಚಾರದ ಬಗ್ಗೆ ಯಾರಿಗೂ ಹೇಳಬಾರದು ಎಂದು ಧಮ್ಕಿ ಕೂಡ ಹಾಕಿದ್ದಾರೆ ಎಂದು ಪೊಲೀಸ್ ರವಿ ಕುಮಾರ್ ಸಿಂಗ್ ಹೇಳಿದ್ದಾರೆ.
ಸದ್ಯಕ್ಕೆ ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿದ್ದು, ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv