ಉಡುಪಿ: ತನ್ನದೇ ಕಾರಿನಲ್ಲಿ ಕುಳಿತು ಚಾಕುವಿನಿಂದ ಹೊಟ್ಟೆ ಕೊಯ್ದುಕೊಂಡು ಬಿಲ್ಡರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ.
ಆಲಿವೆರಾ ಲೂಯೀಸ್ ಆತ್ಮಹತ್ಯೆ ಮಾಡಿಕೊಂಡ ಬಿಲ್ಡರ್. ಲೂಯೀಸ್ ತಮ್ಮ ಕಾರಿನಲ್ಲಿ ಮೊದಲು ತಮ್ಮ ಕೈಗೆ ಚಾಕುವಿನಿಂದ ಕೊಯ್ದುಕೊಂಡು, ನಂತರ ಹೊಟ್ಟೆಗೆ ಇರಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಭಾನುವಾರ ತಡರಾತ್ರಿ ಮಣಿಪಾಲದ ಪೆರಂಪಳ್ಳಿಯ ಸಂಬಂಧಿಕರ ಮನೆಯ ಸಮೀಪ ತಮ್ಮ ಫೋರ್ಡ್ ಕಾರಿನಲ್ಲೇ ಆತ್ಮಹತ್ಯೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಪತ್ನಿಗೆ ಡೆತ್‍ನೋಟ್ ಬರೆದಿರುವ ಲೂಯಿಸ್, ನನ್ನ ಸಾವಿಗೆ ನಾನೇ ಕಾರಣ. ಮಕ್ಕಳನ್ನು ಚೆನ್ನಾಗಿ ನೋಡಿಕೋ. ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ ಎಂದು ಬರೆದಿದ್ದಾರೆ.
ಲೂಯಿಸ್ ಲಕ್ಷ್ಮೀನಗರ, ಮಣಿಪಾಲ, ಸಂತೆಕಟ್ಟೆಯಲ್ಲಿ ಮನೆಯನ್ನು ಹೊಂದಿದ್ದರು. ಈ ಹಿಂದೆ 12 ವರ್ಷ ಖಾಸಗಿ ಶಿಪ್ ನ ಕ್ಯಾಪ್ಟನ್ ಆಗಿ ಕೆಲಸ ಮಾಡಿಕೊಂಡಿಕೊಂಡಿದ್ದರು. ಬಳಿಕ ಕಳೆದ ಕೆಲ ವರ್ಷಗಳಿಂದ ಬಿಲ್ಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ತೀವ್ರ ಖಿನ್ನತೆಗೂ ಒಳಗಾಗಿದ್ದರು ಎನ್ನಲಾಗಿದೆ. ಲಯನ್ಸ್ ಸಂಸ್ಥೆಯಲ್ಲಿ ಹಲವಾರು ಮಂದಿಗೆ ಆರ್ಥಿಕ ಸಹಾಯ ಮಾಡುತ್ತಿದ್ದರು. ಲೂಯಿಸ್ ಅವರ ಈ ಸಾವಿನಿಂದ ನೂರಾರು ಗೆಳೆಯರು ಹಾಗೂ ಸಂಬಂಧಿಕರು ದಿಗ್ಭ್ರಾಂತರಾಗಿದ್ದಾರೆ.
ಲೂಯೀಸ್ ಇದಕ್ಕೂ ಮೊದಲು ಖಾಸಗಿ ಶಿಪ್ ನಲ್ಲಿ ಕ್ಯಾಪ್ಟನ್ ಆಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಆರ್ಥಿಕವಾಗಿ ಸದೃಢವಾಗಿದ್ದರು. ಕಳೆದ ತಡರಾತ್ರಿ ಘಟನೆ ನಡೆದಿರುವ ಸಾಧ್ಯತೆಯಿದ್ದು, ಮೃತದೇಹ ಸಂಪೂರ್ಣ ಮರಗಟ್ಟಿದೆ. ಸ್ಥಳದಲ್ಲಿ ಚಾಕು ಸಹ ಸಿಕ್ಕಿದೆ. ಮಣಿಪಾಲ ವೈದ್ಯರು ಹಾಗೂ ಫೋರೆನ್ಸಿಕ್ ತಜ್ಞರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರ್ಗಿ, ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡುಬರುತ್ತಿದೆ. ಆದರೂ ಸಹ ಪ್ರಕರಣವನ್ನು ಎಲ್ಲಾ ದೃಷ್ಟಿಕೋನಗಳಿಂದಲೂ ತನಿಖೆ ಮಾಡಲಾಗುವುದು ಎಂದು ಎಸ್ ಪಿ ಲಕ್ಷ್ಮಣ ಬ. ನಿಂಬರ್ಗಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಮಣಿಪಾಲದ ಕೆಎಂಸಿಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸ್ಥಳದಲ್ಲಿ ಚಾಕು ಸಿಕ್ಕಿದ್ದು ಪೊಲೀಸ್ ವಶಪಡಿಸಿಕೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv