ಚಿಕ್ಕಮಗಳೂರು: ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಅಯ್ಯನಕೆರೆಯಲ್ಲಿ ನಡೆದಿದೆ.
ಮೃತ ಯುವಕನನ್ನ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯ ಪೂರ್ಣೇಶ್(25) ಎಂದು ಗುರುತಿಸಲಾಗಿದೆ. ಪೂರ್ಣೇಶ್ ಶನಿವಾರ ಸಂಜೆ ತನ್ನ ನಾಲ್ವರು ಸ್ನೇಹಿತರೊಂದಿಗೆ ಅಯ್ಯನಕೆರೆಯಲ್ಲಿ ಈಜಲು ತೆರಳಿದ್ದನು. ಕೆರೆಯಲ್ಲಿ ಸ್ವಲ್ಪ ಹೊತ್ತು ಈಜಿದ್ದಾನೆ. ನಂತರ ಈಜಲು ಸಾಧ್ಯವಾಗದೆ ಇತ್ತ ದಡಕ್ಕೂ ಬರಲಾಗದೆ ಕೆರೆಯಲ್ಲಿ ಮುಳುಗಿದ್ದಾನೆ.
ಸ್ನೇಹಿತ ಮುಳುಗುತ್ತಿದ್ದಾಗ ಉಳಿದ ಸ್ನೇಹಿತರು ಕಾಡಾಲು ಯತ್ನಿಸಿದ್ದಾರೆ. ಆದರೆ ಮೂವರು ಸ್ನೇಹಿತರಿಗೂ ಈಜು ಬರುತ್ತಿರಲಿಲ್ಲ. ಇದರಿಂದ ಅವರು ಮುಳುಗುತ್ತಿದ್ದ ಪೂರ್ಣೇಶ್ ನನ್ನು ಕಾಪಾಡಲು ಬಟ್ಟೆ, ಮರದ ಬಳ್ಳಿಯನ್ನು ಎಸೆಯುತ್ತಾರೆ. ಪೂರ್ಣೇಶ್ ತುಂಬಾ ದೂರ ಹೋಗಿ ಈಜಾಡುತ್ತಿದ್ದ ಕಾರಣ ಮುಳುಗಿ ಸಾವನ್ನಪ್ಪಿದ್ದಾನೆ.
ಸ್ನೇಹಿತರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ರಾತ್ರಿ ಆಗಿದ್ದರಿಂದ ಹುಡುಕಲು ಸಾಧ್ಯವಾಗಿಲ್ಲ. ಇಂದು ಮುಂಜಾನೆಯಿಂದನೇ ಹುಡುಕಾಟ ಶುರುಮಾಡಿದ್ದು, ಸದ್ಯ ಯುವಕನ ಮೃತದೇಹ ಪತ್ತೆಯಾಗಿದೆ.
ಈ ಘಟನೆ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv