ಬೆಂಗಳೂರು: ಸರ್ಕಾರ ಪತನ ಆಗುತ್ತಾ ಎನ್ನುವ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಆ ದಿನ ನೀವು ಬೆಂಗಳೂರಿನಲ್ಲಿಯೇ ಇರಬೇಕು. ಯಾವುದೇ ಕಾರಣಕ್ಕೂ ತಪ್ಪಬಾರದು ಅಂತಾ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರು, ಹಾಲಿ ಶಾಸಕರು, ಕೆಲ ಮಾಜಿ ಸಚಿವರು ಹಾಗೂ ಮಾಜಿ ಶಾಸಕರಿಗೂ ಸೂಚನೆ ನೀಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ‘ಆ ದಿನ’ ದೊಡ್ಡ ರಾಜಕೀಯ ದಂಗೆ ಆರಂಭಿಸಲು ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಆಪ್ತರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಆ ದಿನ ಅಂದರೆ ಸೋಮವಾರ, ಅಂದು ಬಿಜೆಪಿಯು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿಕೆ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು, ‘ದಂಗೆ’ ದಂಗಲ್‍ಗೆ ಕ್ಲೈಮ್ಯಾಕ್ಸ್ ನೀಡಲು ಸಿದ್ಧತೆ ನಡೆಸಿಕೊಂಡಿದೆಯಂತೆ. ಜೊತೆಗೆ ಆಪರೇಷನ್ ಕಮಲಕ್ಕೂ ಯೋಜನೆ ರೂಪಿಸುತ್ತಿದೆ ಎನ್ನುವ ಸುಳಿವು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಗುರುವಾರ ಚನ್ನರಾಯಪಟ್ಟಣ ತಾಲೂಕಿನ ತೋಟಿ ಗ್ರಾಮದಲ್ಲಿ ಮಾತನಾಡಿದ ಸಿಎಂ ಎಚ್‍ಡಿಕೆ, ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಜನಪರ ಸರ್ಕಾರವನ್ನು ಉರುಳಿಸಲು ಬಿಜೆಪಿಯವರು ಮುಂದಾಗಿದ್ದಾರೆ. ಇಂತವರ ವಿರುದ್ಧ ನಾಡಿನ ಜನ ದಂಗೆ ಏಳಬೇಕು ಎಂದು ಹೇಳಿದ್ದರು. ಈಗ ಈ ವಿಚಾರ ಭಾರೀ ಚರ್ಚೆಯಾಗುತ್ತಿದ್ದು, ಆಡಳಿತ ಮತ್ತು ಪ್ರತಿ ಪಕ್ಷದ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv