ಗೋರಖ್‍ಪುರ: ಮಗಳ ಜತೆ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ ಯುವಕನನ್ನು ನೋಡಿದ ತಂದೆಯೊಬ್ಬ ಆತನನ್ನು ಥಳಿಸಿ ಮರ್ಮಾಂಗವನ್ನು ಕತ್ತರಿಸಿದ ಘಟನೆ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ.
11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ದೀಪಚಂದ ಗುಪ್ತಾ ಹಲ್ಲೆಗೊಳಗಾದ ಯುವಕ. ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಲಖ್ನೋದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದು, ಈಗ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ಎಂದು ವರದಿಯಾಗಿದೆ.
ಐಪಿಸಿ ಸೆಕ್ಷನ್ 323 (ಸ್ವ ಇಚ್ಚೆಯಿಂದ ಗಾಯ ಉಂಟುಮಾಡುವುದು) ಹಾಗೂ 326 (ಮಾರಕಾಸ್ತ್ರಗಳಿಂದ ಹಲ್ಲೆ)ರ ಅಡಿ ಪ್ರಕರಣ ದಾಖಲಾಗಿದ್ದು, ಯುವತಿಯ ತಂದೆ ಗುಡ್ಡು ನಿಶಾದ್ ಮತ್ತು ಸೋದರರಾದ ಸಂದೀಪ್ ಪ್ರದೀಪ್‍ನನ್ನು ಪೊಲೀಸರು ಬಂಧಿಸಿದ್ದಾರೆ.
ಮನೆಯಲ್ಲಿ ತನ್ನ ಪುತ್ರಿ ಜತೆ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ ಯುವಕನನ್ನು ನೋಡಿದ ಹಾಗೂ ಇಬ್ಬರು ಪುತ್ರರು ಈ ಕೃತ್ಯವನ್ನು ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಸಂತ್ರಸ್ತ ಯುವಕ ನೋವಿನಿಂದ ನರಳಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ ಎಂದು ಖಜ್ನಿ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ರೈ ಮಾಹಿತಿ ನೀಡಿದ್ದಾರೆ.
11ನೇ ತರಗತಿ ಓದುತ್ತಿದ್ದ ಯುವಕ ಮತ್ತು ಯುವತಿ ಪ್ರೀತಿಸುತ್ತಿದ್ದರು. ಈ ಪ್ರೀತಿಗೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಸಾಕಷ್ಟು ಬಾರಿ ಇಬ್ಬರಿಗೂ ಬುದ್ಧಿವಾದ ಹೇಳಿದ್ದರೂ ಇಬ್ಬರು ಪ್ರೀತಿ ಮುಂದುವರಿಸಿದ್ದರು ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv