ನವದೆಹಲಿ: ಅಕ್ರಮ ಹಣವನ್ನು ವರ್ಗಾವಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಪ್ರಕರಣ ದಾಖಲಿಸಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿಯಲ್ಲಿ ಇಡಿ ಕೇಸ್ ದಾಖಲಿಸಿಕೊಂಡಿದ್ದರಿಂದ ಡಿಕೆಶಿಗೆ ಬಂಧನದ ಭೀತಿ ಎದುರಾಗಿದ್ದು, ಹಿರಿಯ ವಕೀಲರ ಜೊತೆ ಕಾನೂನು ಪ್ರಕ್ರಿಯೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಶಿವಕುಮಾರ್ ಜೊತೆಗೆ ಸಚಿನ್ ನಾರಾಯಣ್, ಶರ್ಮ ಟ್ರಾವೆಲ್ಸ್ ನ ಸುನೀಲ್ ಕುಮಾರ್ ಶರ್ಮ, ದೆಹಲಿಯ ಕರ್ನಾಟಕ ಭವನದ ಸಿಬ್ಬಂದಿ ಆಂಜನೇಯ ಹನುಮಂತಯ್ಯ ಮತ್ತು ರಾಜ್ಯ ಸರಕಾರದ ನಿವೃತ್ತ ಸಿಬ್ಬಂದಿ ರಾಜೇಂದ್ರ ಅವರನ್ನು ಆರೋಪಿಯನ್ನಾಗಿಸಿ ಕೇಸ್ ದಾಖಲಾಗಿದೆ.
ದೆಹಲಿ ನಿವಾಸದಲ್ಲಿ ಪತ್ತೆಯಾದ 8.5 ಕೋಟಿ ರೂ. ಸಿಕ್ಕ ಹಣದ ಸಂಬಂಧ ಆದಾಯ ತೆರಿಗೆ ಇಲಾಖೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿತ್ತು. ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲ ಹಣದ ವಿವರವನ್ನು ಉಲ್ಲೇಖಿಸಿತ್ತು. ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಐಟಿ ಇಲಾಖೆ ಹಿರಿಯ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲ ಹಣದ ವಿವರವನ್ನು ಉಲ್ಲೇಖಿಸಿದ್ದಾರೆ. ಈ ದೂರಿನಲ್ಲಿ ಹವಾಲ ಹಣದ ಮೂಲಕ ಕೋಟಿ ಕೋಟಿ ಹಣವನ್ನು ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಕಳುಹಿಸಿಕೊಟ್ಟಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗಿದೆ. ಇದನ್ನೂ ಓದಿ: ನೋಟ್ ಬ್ಯಾನ್ ಅವಧಿಯಲ್ಲಿ 2 ಸಾವಿರ ಕೋಟಿ ರೂ. ಬದಲಾವಣೆ ಮಾಡಿಸಿದ್ರಂತೆ ಡಿಕೆಶಿ: ಇಡಿಯಲ್ಲಿ ದೂರು
ಐಟಿ ದಾಳಿಯಾದ ಬಳಿಕ ಪತ್ತೆಯಾದ ಡೈರಿಯಲ್ಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಡಿಕೆ ಶಿವಕುಮಾರ್ ಮತ್ತು ಆರೋಪಿಗಳನ್ನು ವಿಚಾರಣೆ ನಡೆಸಿದ್ದರು. ಕೆಜಿ ಎಂಬ ಕೋಡ್ ವರ್ಡ್ ಬಳಸಿ ನಗದು ವ್ಯವಹಾರ ನಡೆಸುತ್ತಿದ್ದಾರೆ ಎನ್ನುವ ಅನುಮಾನದ ಮೇರೆಗೆ ಅಧಿಕಾರಿಗಳು ಆರೋಪಿಗಳಿಗೆ ಪ್ರಶ್ನೆ ಕೇಳಿದ್ದಾರೆ. ಆದರೆ ಈ ಪ್ರಶ್ನೆಗಳಿಗೆ ಆರೋಪಿಗಳಿಂದ ಸರಿಯಾದ ಉತ್ತರ ಸಿಕ್ಕಿರಲಿಲ್ಲ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿತ್ತು.
ಮುಂದೆ ಏನಾಗಬಹುದು?
ಪ್ರಕರಣಣದ ವಿಚಾರಣೆಗಾಗಿ ಡಿಕೆಶಿಯನ್ನು ಬಂಧಿಸಬಹುದು. ಡಿಕೆಶಿಯವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು. ಆರೋಪ ಸಾಬೀತಾದರೆ ಡಿಕೆಶಿ ಹೆಸರಿನಲ್ಲಿರುವ ಎಲ್ಲಾ ಆಸ್ತಿ-ಪಾಸ್ತಿಗಳನ್ನು ಐಟಿ ಇಲಾಖೆ ಮುಟ್ಟುಗೋಲು ಹಾಕಿಕೊಳ್ಳಬಹುದು. ಇದರ ಜೊತೆ 3 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.
ಯಾವೆಲ್ಲ ಕೇಸ್ ದಾಖಲಾಗಿದೆ?
ಕೇಸ್ ನಂ 1: ಈಗಲ್‍ಟನ್ ರೆಸಾರ್ಟ್ ನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಪೇಪರ್ ಹರಿದು ಹಾಕಿದ್ದರಿಂದ, ಐಟಿ ಅಧಿಕಾರಿಗಳು ಸಾಕ್ಷ್ಯ ನಾಶ ಆರೋಪದಡಿ ಪ್ರಕರಣ ದಾಖಲಿಸಿದ್ದರು.
ಕೇಸ್ ನಂ 2:
ಡಿಕೆಶಿಯವರು ಅಕ್ರಮವಾಗಿ ಕೋಟ್ಯಾಂತರ ರೂಪಾಯಿಯನ್ನು ಹವಾಲಾ ಮೂಲಕ ಬೆಂಗಳೂರಿನಿಂದ ದೆಹಲಿಗೆ ರವಾನಿದ್ದಾರೆ ಎನ್ನುವ ಆರೋಪದ ಮೇಲೆ ಹವಾಲಾ ಪ್ರಕರಣ ದಾಖಲಾಗಿತ್ತು.
ಕೇಸ್ ನಂ 3:
ಡಿಕೆಶಿಯವರಿಗೆ ಸೇರಿರುವ ದೆಹಲಿಯ ಅಪಾರ್ಟ್‍ಮೆಂಟ್‍ವೊಂದರಲ್ಲಿ ದಾಖಲೆ ರಹಿತ 8.50 ಕೋಟಿ ರೂಪಾಯಿ ಹಣ ಪತ್ತೆಯಾಗಿತ್ತು. ಇದರ ವಿರುದ್ಧ ಐಟಿ ಅಧಿಕಾರಿಗಳು ದಾಖಲೆ ರಹಿತ ಹಣ ಸಂಗ್ರಹ ಆರೋಪದಡಿ ಪ್ರಕರಣ ದಾಖಲಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv