ನಾಗಾಸಾಧು ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ – ವೈರಲ್ ವಿಡಿಯೋ ಹಿಂದಿನ ಸತ್ಯ ಇಲ್ಲಿದೆ

Public TV
3 Min Read
Fake Claim

ಬೆಂಗಳೂರು: ಭಾನುವಾರ ಫೇಸ್‍ಬುಕ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯಂತೆ ನಾಗಾಸಾಧು ಎಂದು ಹೇಳುವ ವ್ಯಕ್ತಿಯೊಬ್ಬನ ಮೇಲಿನ ಹಲ್ಲೆಯ ವಿಡಿಯೋ ವೈರಲ್ ಆಗುತ್ತಿದೆ. ಕೆಲವರು ತಮ್ಮ ವಾಟ್ಸಪ್ ಸ್ಟೇಟಸ್ ನಲ್ಲಿ ಈ ವಿಡಿಯೋ ಹಾಕಿಕೊಳ್ಳುವ ಮೂಲಕ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ಹಲವರು ಫೇಸ್‍ಬುಕ್ ನಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರು ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಪ್ರಾಯವನ್ನು ಪೋಸ್ಟ್ ಮಾಡುತ್ತಿದ್ದಾರೆ. ಕೆಲ ಮುಸ್ಲಿಂ ಯುವಕರು ಅಮಾಯಾಕ ನಾಗಾಸಾಧು ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡ್ತಿದ್ದಾರೆ ಎಂದು ಸಾಲುಗಳನ್ನು ಹಾಕಿ ವಿಡಿಯೋ ಶೇರ್ ಆಗುತ್ತಿದೆ. ಆದ್ರೆ ಈ ವಿಡಿಯೋ ನಿಜವಾದ ಸತ್ಯ ಇಲ್ಲಿದೆ.

ಏನಿದು ವಿಡಿಯೋ..?
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಖಾಸಗಿ ಮಾಧ್ಯಮವೊಂದು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದೆ. ಹಲ್ಲೆಗೊಳಗಾದ ವ್ಯಕ್ತಿ ಓರ್ವ ಭಿಕ್ಷುಕನಾಗಿದ್ದು, ನಾಗಾ ಸಾಧು ಅಲ್ಲ ಅಂತಾ ಹೇಳಿದೆ. ಭಿಕ್ಷುಕ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಆತನನ್ನು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದರು ಎಂಬ ಸ್ಫೋಟಕ ವಿಷಯ ರಿವೀಲ್ ಆಗಿದೆ.

NAGA SADHU

ಈ ವಿಡಿಯೋ ಶಿಖಾ ಎಂಬ ಹೆಸರಿನ ಖಾತೆಯಿಂದ ಮೊದಲ ಬಾರಿಗೆ ಅಪ್ಲೋಡ್ ಆಗಿದೆ. ಶಿಖಾ ವಿಡಿಯೋ ಅಪ್ಲೋಡ್ ಮಾಡಿಕೊಂಡು, ‘ಭಾರತದ ಕೆಲ ಮುಸ್ಲಿಂ ಯುವಕರು ಬಡ ಭಿಕ್ಷುಕ ಮೇಲೆ ಹಲ್ಲೆ ನಡೆಸಿದ್ದಾರೆ. ಆದಷ್ಟು ಬೇಗ ಈ ಮುಸ್ಲಿಂ ಅಪರಾಧಿಗಳನ್ನು ಪೊಲೀಸರು ಬಂಧಿಸಬೇಕು.’ ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಹಲವರು ಶೇರ್ ಮತ್ತು ಟ್ವೀಟ್ ಮಾಡಿಕೊಂಡು ಪ್ರಧಾನಿ ಮೋದಿ ಅವರಿಗೂ ಸಹ ಟ್ಯಾಗ್ ಮಾಡಿದ್ದಾರೆ. ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ನೆಟ್ಟಿಗರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವಿಡಿಯೋವನ್ನು ಹಲವು ರಾಜಕೀಯ ಗಣ್ಯರು ಮತ್ತು ಸಿನಿಮಾ ತಾರೆಯರು ಸಹ ಶೇರ್ ಮಾಡಿಕೊಂಡಿದ್ದಾರೆ. ಕೆಲವರು ವಿಡಿಯೋ ಶೇರ್ ಮಾಡಿಕೊಳ್ಳುವ ಕೋಮುಭಾವನೆ ಹುಟ್ಟಿಸುವಂತಹ ಸಾಲುಗಳನ್ನು ಬರೆದಿದ್ದಾರೆ. ನಟ ಕೊಯಿರಲಾ ಮಿತ್ರ ವಿಡಿಯೋ ಶೇರ್ ಮಾಡಿಕೊಂಡು, ‘ಭಾರತದಲ್ಲಿ ಇಂತಹ ಘಟನೆಗಳು ಈ ಮೊದಲು ನಡೆಯುತ್ತಿದ್ದವು, ಅಂತಹ ಪ್ರಕರಣಗಳು ಇಂದು ನಡೆಯುತ್ತಿವೆ.’ ಎಂದು ಬರೆದುಕೊಂಡಿದ್ದರು. ಕೆಲ ಸಮಯದ ಬಳಿಕ ಎಚ್ಚೆತ್ತ ನಟ ವಿಡಿಯೋವನ್ನು ತಮ್ಮ ಖಾತೆಯಿಂದ ಡಿಲೀಟ್ ಮಾಡಿದ್ದಾರೆ.

ಹಾಗಾದ್ರೆ ನಿಜವಾಗಿ ನಡೆದಿದ್ದೇನು?:
ವಿಡಿಯೋ ವೈರಲ್ ಆಗುತ್ತಿದ್ದಂತೆ ಡೆಹರಾಡೂನ್ ಎಸ್.ಎಸ್.ಪಿ. ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ. ಆಗಸ್ಟ್ 24 ರಿಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಸಂಬಂಧಿಸಿದಂತೆ ಕೆಲವರು ಪ್ರಚೋದನಕಾರಿ ಸಾಲುಗಳನ್ನು ಬರೆದುಕೊಳ್ಳುತ್ತಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿ ಹೆಸರು ಸುಶೀಲನಾಥ್ ಸೋಮನಾಥ್. ಡೆಹ್ರಾಡೂನಿನ ವಿಕಾಸನಗರದ ನಿವಾಸಿಯಾಗಿದ್ದು, ಸಾಧು ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದನು. ಸುಶೀಲನಿಗೆ ಪತ್ನಿ ಸೇರಿದಂತೆ 6 ಜನ ಮಕ್ಕಳು ಇದ್ದಾರೆ. ಸುಶೀಲನಾಥ್ ಮೂಲತಃ ಹರಿಯಾಣ ರಾಜ್ಯದ ಯಮುನಾ ನಗರದ ಜಗದಾರಿ ಎಂಬಲ್ಲಿಯ ನಿವಾಸಿಯಾಗಿದ್ದು, ಡೆಹ್ರಾಡೂನಿನಲ್ಲಿ ವಾಸವಾಗಿದ್ದಾನೆ. ಸುಶೀಲನಾಥ್ ಪ್ರತಿದಿನ ನಕಲಿ ವೇಷ ಧರಿಸಿ ಭಿಕ್ಷೆ ಬೇಡಿ ಜೀವನ ನಡೆಸುವ ವ್ಯಕ್ತಿಯಾಗಿದ್ದು, ಮದ್ಯವ್ಯಸನಿ ಸಹ ಆಗಿದ್ದಾನೆ.

ಆಗಸ್ಟ್ 24 ರಂದು ಸುಶೀಲನಾಥ್ ಪಟೇಲನಗರದ ಮನೆಯೊಂದಕ್ಕೆ ನುಗ್ಗಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಕೂಡಲೇ ಮನೆಯಲ್ಲಿದ್ದ ಯುವತಿಯ ಸೋದರ ಶುಭಂ ಎಂಬವರ ಆತನನ್ನು ಹೊರ ಎಳೆದು ತಂದಿದ್ದಾರೆ. ನೆರೆಹೊರೆಯವರು ಸುಶೀಲನಾಥನಿಗೆ ಧರ್ಮದೇಟು ನೀಡಿ ನಂತರ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಮಯದಲ್ಲಿ ಕೆಲವರು ಈ ದೃಶ್ಯಗಳನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡು ಕೋಮು ಸಂಘರ್ಷದ ರೂಪ ನೀಡಿದ್ದಾರೆ. ಘಟನೆ ಸಂಬಂಧ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಟ್ವಿಟ್ಟರ್ ನಲ್ಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *