ಹುಬ್ಬಳ್ಳಿ: ದೇಶದಲ್ಲಿರುವ ಎಲ್ಲಾ ಪ್ರಾದೇಶಿಕ ಪಕ್ಷಗಳ ಜೊತೆಗೆ ಚರ್ಚಿಸಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿರುವ ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕುತ್ತೇವೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಜನರು ನಂಬಿದ್ದ ರೀತಿಯಲ್ಲಿ ಆಡಳಿತ ನಡೆಸುತ್ತಿಲ್ಲ. ದೇಶದ ಆಸ್ತಿಯನ್ನು ಹಗಲು ದರೋಡೆ ನಡೆಸುತ್ತಿದ್ದಾರೆ. ಲೋಕಪಾಲ್ ಬಿಲ್ ಪಾಸ್ ಮಾಡದ ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕು ಇಲ್ಲವೆಂದು ಗುಡುಗಿದರು.
ರಫೆಲ್ ಯುದ್ದ ವಿಮಾನ ಖರೀದಿಯಲ್ಲಿ 40 ಸಾವಿರ ಕೋಟಿ ರೂಪಾಯಿ ಡೀಲ್ ನಡೆದಿದೆ. ಈ ಬಗ್ಗೆ ಯಾರು ಕೂಡಾ ಸ್ಪಷ್ಟನೆ ನೀಡುತ್ತಿಲ್ಲ. ಅಲ್ಲದೇ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಯಾವ ಮಾಧ್ಯಮದವರು ಬರೆಯದ ಹಾಗೆ ಮಾಡಿದ್ದಾರೆ. ಒಂದು ವೇಳೆ ಅವರ ವಿರುದ್ಧ ಧ್ವನಿ ಎತ್ತುವ ಪತ್ರಕರ್ತರನ್ನು ಕೆಲಸದಿಂದ ತೆಗೆಸಿ ಹಾಕುವ ಹಾಗೆ ಮಾಡುತ್ತಿದ್ದಾರೆ. ಇದು ಶುದ್ಧ ಸುಳ್ಳಿನ ಸರ್ಕಾರ ಎಂದು ಕಿಡಿಕಾರಿದರು.
ಈಗಾಗಲೇ ದೇಶದ ಎಲ್ಲಾ ಪ್ರಾದೇಶಿಕ ಪಕ್ಷಗಳ ಜೊತೆ ಮಾತುಕತೆ ನಡೆಸಿದ್ದೇವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿರುವ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುತ್ತೇವೆ. ಅಲ್ಲದೇ ರಾಜ್ಯದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಗೆಲುವು ಶತಸಿದ್ದ. ನಮ್ಮ ಹಿಂದಿನ ಸರ್ಕಾರ ಕೊಟ್ಟ ಜನಪರ ಯೋಜನೆಗಳು ನಮ್ಮ ಕೈ ಹಿಡಿಯಲಿವೆ. ಹೀಗಾಗಿ ಚುನಾವಣೆಯಲ್ಲಿ ಜಯಭೇರಿಗಳಿಸುತ್ತೇವೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv