ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಏಕಾಂಗಿ ಅಲ್ಲ. ಅವರೊಬ್ಬ ಮಾಸ್ ಲೀಡರ್ ಆಗಿದ್ದು, ರಾಷ್ಟ್ರೀಯ ಪಕ್ಷದ ಮುಖಂಡರು, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿದ್ದಾರೆ. ಯಾವ ಸಮಯದಲ್ಲಿ ಸಿಎಂ ಆಗುತ್ತೇನೆ ಎಂಬ ವಿಷಯ ಇಲ್ಲಿ ಮುಖ್ಯವಾಗುತ್ತದೆ. ಜನರೊಂದಿಗೆ ಮಾತನಾಡುವ ವೇಳೆ ಮತ್ತೆ ನಾನು ಸಿಎಂ ಆಗುತ್ತೇನೆ ಎಂದು ಹೇಳಿದ್ದಾರೆ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಹೇಳಿದ್ದಾರೆ.
ಜನರೊಂದಿಗೆ ಮಾತನಾಡುವಾಗ ನಾನು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ರೂ, ಚುನಾವಣೆಯಲ್ಲಿ ನಮಗೆ ಬಹುಮತ ಸಿಗಲಿಲ್ಲ. ಆಗ ನೀವು ಮತ್ತೆ ಸಿಎಂ ಆಗಬೇಕು ಅಂದಾಗ ಜನರ ಆಶೀರ್ವಾದ ನಮ್ಮ ಮೇಲಿದ್ದರೆ ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತೀನಿ ಅಂತಾ ಹೇಳಿದ್ದರು. ಈಗಾಗಲೇ ತಮ್ಮ ಹೇಳಿಕೆಯ ಬಗ್ಗೆ ಮೈಸೂರಿನಲ್ಲಿ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿದ್ದಾರೆ ಅಂತಾ ತಿಳಿಸಿದರು.
ರಾಜಕಾರಣದಲ್ಲಿ ಎಲ್ಲರಿಗೂ ಅಧಿಕಾರ ಪಡೆಯಬೇಕೆಂಬ ಆಸೆ ಇದ್ದೆ ಇರುತ್ತದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷನಿಂದ ಹಿಡಿದು ತಾವು ಅಧಿಕಾರದಲ್ಲಿ ಇರಬೇಕು ಎಂದು ಇಚ್ಛಿಸುತ್ತಾರೆ. ರಾಜಕಾರಣದಲ್ಲಿ ಕಾಂಗ್ರೆಸ್ ಮಾಜಿ ಅಧಕ್ಷೆ ಸೋನಿಯಾ ಗಾಂಧಿ ಅವರನ್ನು ಹೊರತುಪಡಿಸಿ ಎಲ್ಲರಿಗೂ ಅಧಿಕಾರ ಪಡೆಯಬೇಕೆಂಬ ಮನೋಭಾವ ಇರುತ್ತದೆ ಎಂದು ತಿಳಿಸಿದರು.
ಸಮ್ಮಿಶ್ರ ಸರ್ಕಾರ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ. ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಸಿದ್ದರಾಮಯ್ಯರ ಹೇಳಿಕೆಗೂ ಸಮ್ಮಿಶ್ರ ಸರ್ಕಾರ ರಚನೆಗೆ ಸಂಬಂಧಿಸಿಲ್ಲ. ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು, ಇನ್ನು ಮೂರು ತಿಂಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಾಧ್ಯವಿಲ್ಲ ಎಂಬವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ಕೆಲವರು ಕಾಂಗ್ರೆಸ್ ಶಾಸಕರು ನಮ್ಮ ಜೊತೆ ಇದ್ದಾರೆ ಎಂದು ಹೇಳುತ್ತಿದ್ದಾರೆ. ಸೆಪ್ಟೆಂಬರ್ 3ಕ್ಕೆ ಸರ್ಕಾರ ಬೀಳುತ್ತೆ ಎಂಬ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, 5 ವರ್ಷ ಪೂರ್ಣ ಮಾಡಲಿದೆ ಎಂದು ಮಾಜಿ ಸಚಿವರು ಸ್ಪಷ್ಟನೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv