ಯಾದಗಿರಿ: ಪ್ರಯಾಣಿಕನಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಸಂಚಾರಿ ನಿರೀಕ್ಷಕ ತಂಡವು ಕಂಡಕ್ಟರ್ ಮೇಲೆ ಕೇಸ್ ಹಾಕಿದ್ದರು. ಇದರಿಂದ ಮನನೊಂದು ಕಂಡಕ್ಟರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದದಲ್ಲಿ ನಡೆದಿದೆ.
ನಾಗರಾಜ್ ಆತ್ಮಹತ್ಯೆಗೆ ಯತ್ನಿಸಿದ ನಿರ್ವಾಹಕ. ಇವರು ವಾಯುವ್ಯ ಸಾರಿಗೆ ವಿಭಾಗಕ್ಕೆ ಸೇರಿದ ಬಸ್ಸಿನ ನಿರ್ವಾಹಕರಾಗಿದ್ದು, ಶನಿವಾರ ಬಾದಾಮಿಯಿಂದ ಯಾದಗಿರಿ ಮಾರ್ಗವಾಗಿ ಹೈದರಾಬಾದ್‍ಗೆ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಸಂಚಾರಿ ನೀರಿಕ್ಷಕ ತಂಡವು ಬಸ್ಸಿನಲ್ಲಿದ್ದ ಪ್ರಯಾಣಿಕರ ಟಿಕೆಟ್ ಪರಿಶೀಲನೆಗೆ ಮುಂದಾಗಿದ್ದರು. ಬಸ್ಸಿನಲ್ಲಿ ಓರ್ವ ಪ್ರಯಾಣಿಕ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ಅಧಿಕಾರಿಗಳು ಪ್ರಯಾಣಿಕನಿಗೂ ದಂಡ ವಿಧಿಸಿ, ಕರ್ತವ್ಯಲೋಪ ಎಸಗಿದ್ದ ನಿರ್ವಾಹಕನ ಮೇಲೆ ಕೇಸ್ ಹಾಕಿ ತೆರಳಿದ್ದರು.
ಅಧಿಕಾರಿಗಳು ಕೇಸ್ ಹಾಕಿದ್ದಕ್ಕೆ ನಿರ್ವಾಹಕ ತೀವ್ರವಾಗಿ ಮನನೊಂದು, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಅಲ್ಲದೇ ಬಸ್ಸು ಯಾದಗಿರಿಗೆ ಬರುತ್ತಿದ್ದಂತೆ, ವಿಷವನ್ನು ಖರೀದಿಸಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ವಿಷ ಕುಡಿದ ಬಳಿಕ ತೀವ್ರವಾಗಿ ಅಸ್ವಸ್ಥಗೊಂಡು, ಒದ್ದಾಡುತ್ತಿದ್ದ ನಾಗರಾಜುನನ್ನು ಗಮನಿಸಿದ ಬಸ್ಸಿನ ಚಾಲಕ, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ನಿರ್ವಾಹಕ ನಾಗರಾಜು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv