-ಮಗ-ಸೊಸೆ ಶಿಕ್ಷಕರಾದ್ರೂ ತಂದೆ ಮಾತ್ರ ಬೀದಿಪಾಲು
ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವಲಬಾಪುರದ ನಿವಾಸಿಯಾದ 63 ವರ್ಷದ ಸಂಗಯ್ಯ ಸೊಪ್ಪಿನಮಠ ಎಂಬವರ ಕರುಣಾಜನಕ ಕಥೆ. ಸಂಗಯ್ಯ ಅವರಿಗೆ ಮೂರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಇಂದು ಯಾವ ಮಕ್ಕಳ ಆಶ್ರಯ ಸಿಗದೇ ಬಸ್ ನಿಲ್ದಾಣದಲ್ಲಿ ವಾಸವಾಗಿದ್ದಾರೆ. ಸಂಗಯ್ಯರ ಹಿರಿಯ ಮಗ ಜಗದೀಶ್ ವ್ಯಾಪಾರಿ, ಪರಮೇಶ್ವರಯ್ಯ ವೃತ್ತಿಯಲ್ಲಿ ಶಿಕ್ಷಕ, ಮತ್ತೊಬ್ಬ ಮಗ ಹೇಮಯ್ಯ ಖಾಸಗಿ ಕಂಪೆನಿ ಉದ್ಯೋಗಿ ಹಾಗೂ ಎರಡು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದಾರೆ.
ತುಂಬು ಕುಟುಂಬದಲ್ಲಿ ನೆಮ್ಮದಿಯಾಗಿದ್ದ ವೃದ್ಧ ತಂದೆ ಸಂಗಯ್ಯ ಅನ್ಯೋನ್ಯವಾಗಿದ್ದರು. ಆದ್ರೆ ಕೆಲವು ದಿನಗಳ ಹಿಂದೆ ಸಂಗಯ್ಯ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಆಸ್ಪತ್ರೆ ವೆಚ್ಚಕ್ಕಾಗಿ ಇದ್ದ ಸೈಟ್ ಮಾರಿ ಬಂದ ಹಣದಿಂದ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಹೀಗಾಗಿ ನಮಗೆ ಆಸ್ತಿ ಮಾಡಲಿಲ್ಲ, ಇದ್ದ ಸೈಟ್‍ನ್ನು ಮಾರಿಕೊಂಡಿದ್ದಾರೆಂದು ಮಕ್ಕಳು ಮನೆಯಿಂದ ದೂರ ತಳ್ಳಿದ್ದಾರೆ.
ಎಲ್ಲರೂ ಇದ್ದೂ ಯಾರೂ ಇಲ್ಲದಂತೆ ಅನಾಥವಾಗಿರುವ ಸಂಗಯ್ಯನವರು ಗ್ರಾಮದಲ್ಲಿ ಅವರಿವರು ನೀಡುವ ಊಟವನ್ನು ಮಾಡುತ್ತಾರೆ. ಕತ್ತಲಾಗುತ್ತಿದ್ದಂತೆ ಬಸ್ ನಿಲ್ದಾಣಕ್ಕೆ ಬಂದು ಕೊರೆಯುವ ಚಳಿಯಲ್ಲಿ ರಾತ್ರಿ ಕಳೆಯುತ್ತಿದ್ದಾರೆ.
ಸುಮಾರು 10 ವರ್ಷಗಳಿಂದ ಹೀಗೆ ಜೀವನ ಮಾಡುತ್ತಿರುವ ಸಂಗಯ್ಯನವರು ನನಗೆ ಮಕ್ಕಳ ಆಶ್ರಯ ಬೇಕು ಅಂತ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದಾರೆ. ನ್ಯಾಯಾಲಯ ತಂದೆಗೆ ಆಶ್ರಯ ನೀಡಲು ಸೂಚಿಸಿದೆ. ಹಾಗಾಗಿ ಒಬ್ಬ ಮಗ 2 ಸಾವಿರ, ಇನ್ನೊಬ್ಬ ಮಗ 1 ಸಾವಿರ ರೂ. ಕೊಡುವುದಾಗಿ ಕೋರ್ಟ್ ನಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ ವೃದ್ಧ ತಂದೆಯ ಜೀವನ ನಿರ್ವಹಣೆಗೆ ಮಕ್ಕಳು ಹಣ ನೀಡದೇ, ಮನೆಯಲ್ಲಿ ಆಶ್ರಯವನ್ನೂ ನೀಡದೇ ಬೀದಿ ಪಾಲು ಮಾಡಿದ್ದಾರೆ.
ಮಕ್ಕಳಿಗೆ ಆಸ್ತಿ ಮಾಡಲಿಲ್ಲ, ಮಕ್ಕಳಿಗಾಗಿ ಆಸ್ತಿ ಉಳಿಸಲಿಲ್ಲವೆಂದು ಹೆತ್ತ ತಂದೆಯನ್ನ ದೂರ ಮಾಡಿ ಅನಾಥ ಮಾಡಿರೋ ಮಕ್ಕಳ ವರ್ತನೆ ನಿಜಕ್ಕೂ ದುರಂತ. ಕರುಳ ಬಳ್ಳಿಗಳ ಬದುಕಿಗಾಗಿ ತಮ್ಮ ಜೀವವನ್ನೆ ಮುಡಿಪಿಡುವ ಹೆತ್ತವರನ್ನು ಮಕ್ಕಳು ಕನಿಷ್ಠ ಸೌಜನ್ಯದಿಂದ ನೋಡಿಕೊಳ್ಳಲಿ ಎಂಬವುದೇ ಬೆಳಕು ಕಾರ್ಯಕ್ರಮದ ಉದ್ದೇಶ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=4zIbqnSClTo