ಸಾ.ರಾ ಮಹೇಶ್ ವಿರುದ್ಧ ನಿರ್ಮಲಾ ಸೀತಾರಾಮನ್ ಕಿಡಿ- ಗೊಂದಲ ಕುರಿತು ರಕ್ಷಣಾ ಸಚಿವರ ಸ್ಪಷ್ಟನೆ

Public TV
3 Min Read
sa ra mahesh nirmala sitaraman

ಬೆಂಗಳೂರು: ಕೊಡಗು ಪ್ರವಾಹ ಪೀಡಿತ ಪ್ರದೇಶ ಭೇಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಉಂಟಾದ ಗೊಂದಲದ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದು ಕೊಡಗು ಉಸ್ತುವಾರಿ ಸಚಿವ ಸಾರಾ ಮಹೇಶ್ ಅವರಿಗೆ ದೇಶದ ರಾಜಕೀಯ ವ್ಯವಸ್ಥೆ ಬಗ್ಗೆ ಪರಿಜ್ಞಾನ ಇಲ್ಲ ಎಂದು ಕಿಡಿಕಾರಿದ್ದಾರೆ.

ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆ ಸ್ಪಷ್ಟನೆ ನೀಡಿ ಪತ್ರಿಕಾ ಬಿಡುಗಡೆ ಮಾಡಿದ್ದು, ಈ ಹೇಳಿಕೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ. ಅದರ ಪೂರ್ಣ ರೂಪ ಇಂತಿದೆ.

ರಕ್ಷಣಾ ಸಚಿವರ ಕೊಡಗು ಭೇಟಿ ವೇಳೆ ಜಿಲ್ಲಾಡಳಿತದೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತವಾರಿ ಮಂತ್ರಿಗಳಾದ ಶ್ರೀ ಸಾ.ರಾ.ಮಹೇಶ್ ಅವರ ಮೇಲೆ ರಕ್ಷಣಾ ಸಚಿವರು ಕೋಪಗೊಂಡಿದ್ದರು ಎಂದು ಕೆಲವು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದೆ.

ಜಿಲ್ಲಾ ಉಸ್ತುವಾರಿ ಮಂತ್ರಿಗಳು ರಕ್ಷಣಾ ಮಂತ್ರಿಗಳ ಬಗ್ಗೆ ವೈಯಕ್ತಿಕ ಟೀಕೆ ಮಾಡಿರುವ ಬಗ್ಗೆಯೂ ವರದಿಯಾಗಿದೆ. ಅವರ ಈ ಟೀಕೆಯು ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಘನತೆಗೆ ಚ್ಯುತಿಯುಂಟು ಮಾಡುವಂತಹದಾಗಿದೆ ಹಾಗೂ ಭಾರತ ರಾಜಕೀಯ ವ್ಯವಸ್ಥೆಯ ಬಗ್ಗೆ ಯಾವುದೇ ಗೌರವ ಮತ್ತು ತಿಳುವಳಿಕೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಇಲ್ಲ ಎನ್ನುವುದನ್ನು ತೋರಿಸಿದೆ.

ಈ ಕುರಿತ ಸ್ಪಷ್ಟನೆ ನೀಡಲು ಅಂದಿನ ಪ್ರವಾಸ ಕಾರ್ಯಕ್ರಮದ ಪೂರ್ಣ ಮಾಹಿತಿಯ ವಿವರಗಳನ್ನು ಇಲ್ಲಿ ನೀಡಲಾಗಿದೆ: ರಕ್ಷಣಾ ಮಂತ್ರಿಗಳ ಪ್ರವಾಸ ಕಾರ್ಯಕ್ರಮದ ಕುರಿತು ಜಿಲ್ಲಾಡಳಿತವೇ 2 ದಿನಗಳ ಮುಂಚೆಯೇ ವೇಳಾಪಟ್ಟಿ ಅಂತಿಮಗೊಳಿಸಿತ್ತು. ಬಳಿಕ ಜಿಲ್ಲಾಡಳಿತ ಮನವಿ ಮೇರೆಗೆ ಸ್ಥಳೀಯ ಗಣ್ಯರೊಂದಿಗೆ ಸಂವಾದ ಕಾರ್ಯಕ್ರಮವನ್ನು ಪಟ್ಟಿಗೆ ಸೇರಿಸಲಾಯಿತು.

ಹಾನಿಗೀಗಾಡ ಪ್ರದೇಶಗಳ ಭೇಟಿಯ ನಂತರ ನೆರೆಯಿಂದ ತೀವ್ರ ತೊಂದರೆಗೊಳಗಾದ ನಿವೃತ್ತ ಸೈನಿಕರೊಂದಿಗೆ ರಕ್ಷಣಾ ಮಂತ್ರಿಗಳು ಸಂವಾದ ನಡೆಸುವಾಗ ಅದಕ್ಕೆ ಉಸ್ತವಾರಿ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳೊಂದಿಗೆ ಸಭೆಯನ್ನು ಮೊದಲು ನಡೆಸಬೇಕು ಎನ್ನುವುದು ಅವರ ವಾದವಾಗಿತ್ತು. ಆದರೆ ನಿವೃತ್ತ ಸೈನಿಕರ ಯೋಗಕ್ಷೇಮವೂ ರಕ್ಷಣಾ ಇಲಾಖೆಯ ಆದ್ಯತೆಗಳಲ್ಲಿ ಒಂದಾದ ಕಾರಣ ರಕ್ಷಣಾ ಮಂತ್ರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದರು. ಅದರೂ ಉಸ್ತುವಾರಿ ಸಚಿವರು ತಕ್ಷಣ ಆ ಸಭೆ ನಿಲ್ಲಿಸಿ, ಅಧಿಕಾರಿಗಳ ಸಭೆಗೆ ಹೋಗಬೇಕೆಂದು ಒತ್ತಾಯಿಸಿದರು.

ಆಗ ಪರಿಸ್ಥಿತಿಯನ್ನು ಅರಿತ ರಕ್ಷಣಾ ಸಚಿವರು ಮತ್ತಷ್ಟು ಗೊಂದಲ ಉಂಟಾಗುವುದನ್ನು ತಪ್ಪಿಸಲು ಆ ಸಭೆಯನ್ನು ಸ್ಥಗಿತಗೊಳಿಸಿ ಅಧಿಕಾರಿಗಳ ಸಭೆಗೆ ತೆರಳಿದರು. ಅಲ್ಲಿ ಆಗಲೇ ಪತ್ರಿಕಾಗೋಷ್ಟಿಗೆ ವ್ಯವಸ್ಥೆ ಮಾಡಲಾಗಿತ್ತು. ಅದೇ ಸ್ಥಳಕ್ಕೆ ಅಧಿಕಾರಿಗಳನ್ನು ತರಾತುರಿಯಲ್ಲಿ ಕರೆದು ಮಾಧ್ಯಮ ಪ್ರತಿನಿಧಿಗಳ ಉಪಸ್ಥಿತಿಯಲ್ಲೇ ಅಧಿಕಾರಿಗಳ ಸಭೆ ಆರಂಭಿಸಲಾಯಿತು. ಎಲ್ಲಾ ಮಾಧ್ಯಮ ಪ್ರತಿನಿಧಿಗಳ ಎದುರಿನಲ್ಲೇ ಪರಿಶೀಲನಾ ಸಭೆ ನಡೆಸುವ ನಿದರ್ಶನ ಇಲ್ಲವಾದರೂ, ಪರಿಸ್ಥಿಯನ್ನು ತಿಳಿಯಾಗಿಸಲು ಸಭೆಯನ್ನು ನಡೆಸಲಾಯಿತು.

ರಕ್ಷಣಾ ಸಚಿವರು ನಂತರ ತಮಗಾಗಿ ಕಾದಿದ್ದ ಮಾಜಿ ಸೈನಿಕರೊಂದಿಗೆ ಸಂವಾದ ನಡೆಸಿ ಅವರ ಅಹವಾಲು ಆಲಿಸಿದರು. ಜಿಲ್ಲಾಡಳಿತವೇ ಅಂತಿಮಗೊಳಿಸಿದ ಕಾರ್ಯಕ್ರಮದ ಪ್ರಕಾರವೇ ರಕ್ಷಣಾ ಸಚಿವರು ಸಭೆ ನಡೆಸಿದರೂ, ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಪ್ರತಿಕ್ರಿಯೆ ಮತ್ತು ಟೀಕೆ ದುರದೃಷ್ಟಕರ. ಇನ್ನು ರಕ್ಷಣಾ ಸಚಿವರ ಬಗ್ಗೆ ಮಾಡಿರುವ ವೈಯಕ್ತಿಕ ಕೀಳು ಅಭಿರುಚಿಯಿಂದ ಕೂಡಿದ್ದಾಗಿದೆ. ಅವರ ಈ ನಡವಳಿಕೆ ಪ್ರತಿಕ್ರಿಯೆಗೂ ಯೋಗ್ಯವಲ್ಲ.

ರಕ್ಷಣಾ ಸಚಿವರು ಪತ್ರಿಕಾಗೋಷ್ಟಿಯಲ್ಲಿ ಪರಿವಾರ ಎಂದು ಉಲ್ಲೇಖಿಸಿದ್ದನ್ನು ತಪ್ಪಾಗಿ ವ್ಯಾಖ್ಯಾನಿಸಿರುವುದು ಗಮನಕ್ಕೆ ಬಂದಿದೆ. ರಕ್ಷಣಾ ಇಲಾಖೆಯ 4 ವಿಭಾಗಗಳಲ್ಲಿ ನಿವೃತ್ತ ಸೈನಿಕರ ಕಲ್ಯಾಣವೂ ಒಂದು. ರಕ್ಷಣಾ ಇಲಾಖೆಯ ಪರಿವಾರದಲ್ಲಿ ನಿವೃತ್ತ ಸೈನಿಕರು ಸೇರಿರುತ್ತಾರೆ ಎಂಬುವುದು ಇಲ್ಲಿ ಗಮನಿಸಬೇಕಾದ ಅಂಶ. ಈ ಅರ್ಥದಲ್ಲಿ ಪರಿವಾರ ಎನ್ನುವ ಪದ ಬಳಕೆ ಮಾಡಲಾಗಿದೆ. ಉಳಿದಂತೆ ಬೇರೆಲ್ಲಾ ಅಭಿಪ್ರಾಯಗಳೂ ಅಪಾರ್ಥದಿಂದ ಕೂಡಿದ್ದು ಹಾಗೂ ಖಂಡನೀಯ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article