-ಬಾಳುಗೋಡು ಗ್ರಾಮದ 30ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ
ಮಂಗಳೂರು: ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರೀ ದುರಂತದ ಲಕ್ಷಣಗಳು ಕಂಡುಬಂದಿವೆ. ಶಿರಾಡಿ, ಸಂಪಾಜೆ ಘಾಟ್ ಹೆದ್ದಾರಿಯ ಕುಸಿತದ ಬಳಿಕ ಈಗ ಬಿಸ್ಲೆ ಮತ್ತು ಕುದುರೆಮುಖ ಹೆದ್ದಾರಿಯ ಉದ್ದಕ್ಕೂ ಭಾರೀ ಭೂಕುಸಿತ ಸಂಭವಿಸಿದೆ. ಇತ್ತೀಚೆಗಷ್ಟೆ ಕಾಂಕ್ರೀಟ್ ಆಗಿದ್ದ ಬಿಸ್ಲೆ ಘಾಟ್ ರಾಜ್ಯ ಹೆದ್ದಾರಿ ಕುಕ್ಕೆ ಸುಬ್ರಹ್ಮಣ್ಯದಿಂದ ಸಕಲೇಶಪುರಕ್ಕೆ ಸಂಪರ್ಕಿಸುವ ರಸ್ತೆ. ಬಿಸ್ಲೆ ಘಾಟ್ ಉದ್ದಕ್ಕೂ ಜಲ ಸ್ಫೋಟಗೊಂಡು ಬೃಹತ್ ಮರಗಳು ತರಗೆಲೆಗಳಂತೆ ನೀರಿನ ರಭಸಕ್ಕೆ ತೇಲಿ ಬರುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೂಜುಮಲೆ ಎಂಬಲ್ಲಿ ಸೇತುವೆಯೊಂದು ಕೊಚ್ಚಿಹೋಗಿದೆ. ಮುಂಜಾಗ್ರತಾವಾಗಿ ಬಾಳುಗೋಡು, ಕಲ್ಮಕಾರು, ಮರ್ಕಂಜ ಗ್ರಾಮಗಳ 30ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಭಾರೀ ದುರಂತ ಸಂಭವಿಸಿದ್ದ ಜೋಡುಪಾಲದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಜೋಡುಪಾಲ ಆಸುಪಾಸಿನ ಗ್ರಾಮಗಳ 700ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ಕುದುರೆಮುಖ- ಎಸ್ ಕೆ ಬಾರ್ಡರ್ ಹೆದ್ದಾರಿಯೂ ಕುಸಿದಿದ್ದು, ಮಂಗಳೂರು- ಬೆಂಗಳೂರು ರಸ್ತೆ ಸಂಚಾರವೇ ಕಷ್ಟವಾಗಿದೆ. ಏಕೈಕ ಹೆದ್ದಾರಿ ಆಗಿರುವ ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ಸಂಪರ್ಕ ಕಷ್ಟವಾಗಿದೆ. ಇತ್ತ ಭಾರಿ ಮಳೆ ಪರಿಣಾಮ ಸಕಲೇಶಪುರ ಬಳಿಯ ವನಗೂರು, ಸೋಮವಾರಪೇಟೆ, ಹೆಗ್ಗದ್ದೆ ಕಡಗರವಳ್ಳಿ ರಸ್ತೆಗಳು ಭೂಕುಸಿತದಿಂದಾಗಿ ಕಡಿತಗೊಂಡಿವೆ. ಝರಿ ಜಲಪಾತಗಳು ತುಂಬಿ ಹರಿಯುತ್ತಿದ್ದು ಮಣ್ಣು ಸಡಿಲವಿರುವ ಸ್ಥಳಗಳಲ್ಲಿ ಭೂಕುಸಿತವಾಗುತ್ತಿದೆ. ಹಾಸನದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಹಾರಂಗಿಯಿಂದ ನೀರು ಕಡಿಮೆ ಬಿಡುಗಡೆ ಮಾಡಿದ ಪರಿಣಾಮ ಜಲಪ್ರವಾಹ ತಗ್ಗಿದೆ. ರಸ್ತೆ ಸಂಚಾರ ಕೂಡ ಸಹಜ ಸ್ಥಿತಿಗೆ ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv