ಎಟಿಎಂಗೆ ಹಣ ತುಂಬಲು ಸಮಯ ನಿಗದಿ- ಗೃಹ ಸಚಿವಾಲಯದಿಂದ ಆದೇಶ

Public TV
2 Min Read
rupee 2

ನವದೆಹಲಿ: ನಗರ ಪ್ರದೇಶದ ಎಟಿಎಂ ರಾತ್ರಿ 9 ಗಂಟೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಂಜೆ 6ರ ನಂತರ ಹಣ ಹಾಕುವಂತಿಯಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹೊಸ ಆದೇಶಕ್ಕೆ ಮುಂದಾಗಿದೆ.

ಹೊಸ ಆದೇಶವನ್ನು ಫೆಬ್ರವರಿ 8, 2019ರಿಂದ ದೇಶದಲ್ಲಿ ಜಾರಿಗೆ ತರಲಾಗುತ್ತದೆ. ಭದ್ರತೆ ಉದ್ದೇಶದಿಂದ ಇಂತಹ ನಿರ್ಧಾರ ಕೈಗೊಳ್ಳಲಾಗುತ್ತದೆ. ಎಂದು ಗೃಹ ಸಚಿವಾಲಯ ತಿಳಿಸಿದೆ.

ದೇಶದಾದ್ಯಂತ ಎಟಿಎಂಗಳಿಗೆ ಹಣ ಭರ್ತಿ ಮಾಡುವ ಖಾಸಗಿ ಏಜೆನ್ಸಿಗಳು ನಿತ್ಯವೂ ಸುಮಾರು 8 ಸಾವಿರ ವಾಹನಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ. ಇವು ಬ್ಯಾಂಕ್ ಪರವಾಗಿ ಒಂದು ದಿನದಲ್ಲಿ ಒಟ್ಟು 15 ಸಾವಿರ ಕೋಟಿ ರೂ. ಹಣವನ್ನು ಎಟಿಎಂಗಳಿಗೆ ಭರ್ತಿ ಮಾಡುತ್ತವೆ.

ಏಕೆ ಈ ಆದೇಶ?
ಎಟಿಎಂಗಳಿಗೆ ಹಣ ಭರ್ತಿ ಮಾಡಲು ಹೋಗುವ ವಾಹನಗಳ ಮೇಲೆ ದಾಳಿ, ಎಟಿಎಂ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಅಷ್ಟೇ ಅಲ್ಲದೆ ಕೆಲವೊಮ್ಮೆ ಎಟಿಎಂಗೆ ಭರ್ತಿ ಆಗಬೇಕಾಗಿದ್ದ ಹಣವನ್ನು ಖಾಸಗಿ ಏಜೆನ್ಸಿಗಳು ತಮ್ಮ ಬಳಿಯೆ ಇಟ್ಟುಕೊಳ್ಳುತ್ತಿವೆ. ಇದನ್ನು ತಡೆಯುವ ಉದ್ದೇಶದಿಂದ ಈ ಹೊಸ ಕಾರ್ಯಾಚರಣಾ ನಿಯಮಗಳನ್ನು ತರಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ATM 1 rupees

ಆದೇಶದಲ್ಲಿ ಏನಿದೆ?
ನಗರ ಪ್ರದೇಶದ ರಾತ್ರಿ 9 ಗಂಟೆ, ಗ್ರಾಮೀಣ ಪ್ರದೇಶದಲ್ಲಿ ಸಂಜೆ 6 ಗಂಟೆ ಹಾಗೂ ನಕ್ಸಲ್ ಪೀಡಿತ ಎಟಿಎಂ ಗಳಿಗೆ ಸಂಜೆ 4 ಗಂಟೆಯ ಒಳಗಾಗಿಯೇ ಹಣ ಭರ್ತಿ ಮಾಡಬೇಕು. ಜೊತೆಗೆ ಹಣ ಸಾಗಿಸುವ ವಾಹನದಲ್ಲಿ ಇಬ್ಬರು ಸಶಸ್ತ್ರ ಗಾರ್ಡ್‍ಗಳು ಕಡ್ಡಾಯವಾಗಿ ಇರಬೇಕು.

ಎಟಿಎಂಗಳಿಗೆ ಹಣ ಭರ್ತಿ ಮಾಡಲು ಹೊರಟ ವಾಹನದಲ್ಲಿ ಚಾಲಕ, ಇಬ್ಬರು ಸಶಸ್ತ್ರ ಭದ್ರತಾ ಸಿಬ್ಬಂದಿ ಹಾಗೂ ಇಬ್ಬರು ಎಟಿಎಂ ಅಧಿಕಾರಿಗಳು ಇರಬೇಕು. ಒಬ್ಬ ಭದ್ರತಾ ಸಿಬ್ಬಂದಿ ಚಾಲಕನ ಪಕ್ಕದಲ್ಲಿ, ಮತ್ತೊಬ್ಬರು ಹಣ ಇರುವ ಜಾಗದಲ್ಲಿ ಕುಳಿತುಕೊಳ್ಳಬೇಕು. ಅಷ್ಟೇ ಅಲ್ಲದೆ ವಾಹನಕ್ಕೆ ಜಿಪಿಎಸ್ ಅಳವಡಿಸಿರುವ ವಾಹನವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕೆಂದು ತಿಳಿಸಲಾಗಿದೆ.

ಎಟಿಎಂಗೆ ಹಣ ಭರ್ತಿ ಮಾಡುವ ವಾಹನದಲ್ಲಿ 5 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಸಾಗಿಸುವಂತಿಲ್ಲ. ಖಾಸಗಿ ಭದ್ರತಾ ಏಜೆನ್ಸಿಗಳು ವ್ಯಕ್ತಿಯ ವಿಳಾಸ, ಮೂಲ ದಾಖಲೆ, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಮಾಹಿತಿ ಇಲ್ಲದೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಂತಿಲ್ಲ ಎಂದು ಹೊಸ ಆದೇಶದಲ್ಲಿ ಸೇರಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *