ಬೆಂಗಳೂರು: ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
124 ಮಿ.ಮಿ.ಗಿಂತಲೂ ಹೆಚ್ಚು ಪ್ರಮಾಣದಲ್ಲಿ ಕರಾವಳಿ ಮತ್ತು ಮಲೆನಾಡಿನಲ್ಲಿ ಇನ್ನು 4 ದಿನ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಕಡೆ ಸಾಧಾರಣ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ:
ಕಾವೇರಿ ಕಣಿವೆಯಲ್ಲಿ ಮಳೆ ಹೆಚ್ಚಾಗಿರುವುದರಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜ ಸಾಗರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಒಂದು ಲಕ್ಷ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗಿದೆ. ಮಧ್ಯಾಹ್ನ ವೇಳೆಗೆ 1,20,000 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡುವ ಸಾಧ್ಯತೆ ಇದ್ದು, ನದಿಯ ದಂಡೆ ಹಾಗೂ ತಗ್ಗು ಪ್ರದೇಶದಲ್ಲಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರಾದ ಬಸವರಾಜೇಗೌಡ ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಸತತ ಬರಗಾಲದಿಂದ ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗದೆ ಮಂಡ್ಯ ರೈತರು ಬೆಳೆ ಬೆಳೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿ ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅಣೆಕಟ್ಟೆಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು ಹೊರಹರಿವಿನ ಪ್ರಮಾಣದಲ್ಲೂ ಹೆಚ್ಚಾಗಿದೆ. 1994ರ ಜುಲೈ ತಿಂಗಳಲ್ಲಿ ಕೆಆರ್‌ಎಸ್ ಅಣೆಕಟ್ಟೆಯಿಂದ 1,64,603 ಕ್ಯೂಸೆಕ್ ನೀರನ್ನು ನದಿಗೆ ಹರಿಯ ಬಿಡಲಾಗಿತ್ತು. ಆದರೆ ಆ ನಂತರ ಕೆಆರ್‌ಎಸ್ ಹೊರಹರಿವಿನ ಪ್ರಮಾಣ ಒಂದು ಲಕ್ಷ ಕ್ಯೂಸೆಕ್ ಗಡಿ ದಾಟಿರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಕಾಡಿದ ಭೀಕರ ಬರಗಾಲದಿಂದ ಕೆಆರ್‍ಎಸ್ ಅಣೆಕಟ್ಟೆಯ ಹೊರಹರಿವಿನ ಪ್ರಮಾಣ ಇಳಿಮುಖವಾಗುತ್ತಾ ಹೋಗಿತ್ತು.
ಇದೀಗ ಮತ್ತೆ ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹೊರಹರಿವಿನ ಪ್ರಮಾಣ ಒಂದು ಲಕ್ಷ ಕ್ಯೂಸೆಕ್‍ಗೆ ಹೆಚ್ಚಳವಾಗಿದೆ. ಇದರಿಂದಾಗಿ ನದಿ ಪಾತ್ರದ ಜಮೀನಿಗೆ ನೀರು ನುಗ್ಗಿದೆ. ನದಿ ಬಳಿಯಿರುವ ಮಂಟಪಗಳು ನೀರಿನಿಂದ ಆವೃತ್ತವಾಗಿದೆ. ಶ್ರೀರಂಗಪಟ್ಟಣ ನಿಮಿಷಾಂಭ ದೇವಾಲಯದ ಬಳಿಯಿರುವ ಬಟ್ಟೆ ಬದಲಿಸುವ ಸ್ಥಳ ನೀರಿನಿಂದ ಆವೃತ್ತವಾಗಿದೆ. ರಂಗನತಿಟ್ಟು ಪಕ್ಷಿಧಾಮ ಮುಳುಗಡೆ ಆಗಿದೆ. ಅದೇ ರೀತಿ ಸಾಯಿ ಮಂದಿರ ಒಳಗೂ ಕೂಡ ನೀರು ನುಗ್ಗಿದೆ.
ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದ್ದು, ಹೇಮಾವತಿ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಈಗಾಗಲೇ ಭರ್ತಿಯಾಗಿರುವ ಜಲಾಶಯಕ್ಕೆ 29,363 ಕ್ಯೂಸೆಕ್ ಒಳ ಹರಿವು ಇದೆ. ಈಗ ನದಿ, ನಾಲೆಗೆ ಸೇರಿ ಒಟ್ಟು 33,325 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv