ಯಾದಗಿರಿ: ಕೃಷ್ಣಾ ಎಡದಂಡೆ ಕಾಲುವೆ ಒಡೆದ ಪರಿಣಾಮ ಜಿಲ್ಲೆಯ ಸುರಪುರ ತಾಲೂಕಿನ ಹಾವಿನಾಳ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ಇಡೀ ಹಳ್ಳಿ ಕೆರೆಯಂತೆ ನಿರ್ಮಾಣವಾಗಿದೆ.
ಸುರಪುರ ತಾಲೂಕಿನ ನಾರಾಯಣಪೂರ ಗ್ರಾಮದ ಬಸವಸಾಗರ ಜಲಾಶಯದ ಕೃಷ್ಣಾ ಎಡದಂಡೆ ಮುಖ್ಯ ಕಾಲುವೆಯು ಕಳೆದ ಮೂರು ದಿನಗಳ ಹಿಂದೆ ಒಡೆದು ಹೋಗಿದೆ. ಇದರಿಂದಾಗಿ ಹಾವಿನಾಳ ಗ್ರಾಮಕ್ಕೆ ನೀರು ನುಗ್ಗಿದೆ. ನೀರು ನುಗ್ಗಿದ್ದರ ಪರಿಣಾಮ ಇಡೀ ಹಳ್ಳಿಯು ಕೆರೆಯಂತಾಗಿದ್ದು, ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ.
ಬಸವಸಾಗರ ಎಡದಂಡೆಯ ಮುಖ್ಯ ಕಾಲುವೆಯು ಕಳಪೆ ಕಾಮಗಾರಿಯಿಂದ ನಿರ್ಮಿಸಿದ್ದರಿಂದ ಕಾಲುವೆ ಒಡೆದಿದ್ದು, ಅಪಾರ ಪ್ರಮಾಣ ನಷ್ಟವಾಗಿದೆ. ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಬೀದಿ ಬೀದಿಗಳಲ್ಲಿ ನೀರು ನಿಂತಿದೆ. ಇದರಿಂದಾಗಿ ಗ್ರಾಮಸ್ಥರು ಓಡಾಡಲು ಸಹ ಕಷ್ಟವಾಗಿದೆ. ಗ್ರಾಮದ ಪ್ರಮುಖ ರಸ್ತೆ, ಶಾಲೆ ಹಾಗೂ ದೇವಸ್ಥಾನದ ಆವರಣಗಳ ಸುತ್ತಲೂ ನೀರು ನಿಂತಿದೆ ಎಂದು ಹಾವಿನಾಳ ಗ್ರಾಮಸ್ಥರು ಹೇಳಿದ್ದಾರೆ.
ಬಸವಸಾಗರ ಜಲಾಶಯದಿಂದ ಕಾಲುವೆಗೆ ಸ್ವಲ್ಪ ಪ್ರಮಾಣದ ನೀರು ಹರಿಸಿದಕ್ಕೆ ಇಷ್ಟು ಪ್ರಮಾಣದ ಹಾನಿಯಾಗಿದೆ. ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಕಾಲುವೆಗೆ ನೀರನ್ನು ಹರಿಸಿದರೆ ಭಾರೀ ಅನಾಹುತವಾಗುತಿತ್ತು. ಈಗಾಗಲೇ ಗ್ರಾಮದಲ್ಲಿ ನೀರು ನುಗ್ಗಿದ್ದರಿಂದ ಮನೆಗಳಲ್ಲಿದ್ದ ಎಲ್ಲಾ ವಸ್ತುಗಳು ಸಂಪೂರ್ಣವಾಗಿ ಹಾಳಾಗಿವೆ. ಈಗಲಾದರೂ ಕೆಬಿಜೆಎನ್‍ಎಲ್(ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ) ಅಧಿಕಾರಿಗಳು ಒಡೆದಿರುವ ಕಾಲುವೆ ದುರಸ್ಥಿ ಮಾಡಿ ಗ್ರಾಮಕ್ಕೆ ನೀರು ಬಾರದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಮಂಜುನಾಥ್ ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews