ಮಡಿಕೇರಿ: ಕೊಡಗಿನಲ್ಲಿ ಮಳೆರಾಯನ ಅಬ್ಬರಕ್ಕೆ ಗುಡ್ಡ ಕುಸಿದಿದ್ದು, ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿ 275 ಸಂಚಾರವನ್ನು ಬಂದ್ ಮಾಡಲಾಗಿದೆ.
ಮಡಿಕೇರಿ ತಾಲೂಕಿನ ಮದೆ ಗ್ರಾಮದಲ್ಲಿ ನಿನ್ನೆ ರಾತ್ರಿ ಧಾರಾಕಾರ ಮಳೆಯಾಗಿದ್ದು, ಬೃಹತ್ ಗಾತ್ರದ ಗುಡ್ಡ ಕುಸಿತವಾಗಿದೆ. ಸುಮಾರು 200 ಅಡಿಗಳಷ್ಟು ಎತ್ತರದಿಂದ ಮಣ್ಣು ಕುಸಿಯುತ್ತಿದೆ. ಇದರಿಂದಾಗಿ ಸಾರ್ವಜನಿಕರು ಅಂತಕಕ್ಕೆ ಒಳಗಾಗಿದ್ದಾರೆ. ರಸ್ತೆಯ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣು ಬಿದ್ದಿದ್ದು, ಮಡಿಕೇರಿ ಮಂಗಳೂರು ರಸ್ತೆ ಸಂಪರ್ಕ ಅಸ್ತವ್ಯಸ್ತವಾಗಿದೆ.
ಮಂಗಳೂರು- ಮಡಿಕೇರಿಗೆ ಪರ್ಯಾಯ ಮಾರ್ಗ ಇಲ್ಲದೇ ಒಂದು ಕಿ.ಮೀ ವರೆಗೆ ರಸ್ತೆಯಲ್ಲಿಯೇ ಚಾಲಕರು ತಮ್ಮ ವಾಹನವನ್ನು ನಿಲ್ಲಿಸಿದ್ದಾರೆ. ಪ್ರಯಾಣಿಕರು ಪರದಾಡುವಂತಗಿದ್ದು, ಎಚ್ಚೆತ್ತುಕೊಂಡ ಅಧಿಕಾರಿಗಳು ಮಡಿಕೇರಿಯಿಂದ ಮಂಗಳೂರಿಗೆ ಹೊರಡಿದ್ದ ವಾಹನಗಳಿಗೆ ಭಾಗಮಂಡಲ ರಸ್ತೆ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಗುಡ್ಡ ಕುಸಿದ ಸ್ಥಳದಲ್ಲಿ 6 ಜೆಸಿಬಿಗಳು ರಸ್ತೆ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುತ್ತಿವೆ. ಆದರೆ ಮಳೆ ನಿರಂತರವಾಗಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಮತ್ತೆ ಮಣ್ಣು ಕುಸಿಯುವ ಭೀತಿ ಕಾಡುತ್ತಿದ್ದು, ಅಪಾಯದಲ್ಲಿಯೇ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಂಚಾರ ಅಸ್ತವ್ಯಸ್ತವಾಗಿದ್ದು, ನೂರಾರು ವಾಹಗಳು ರಸ್ತೆ ಮಧ್ಯದಲ್ಲಿಯೇ ನಿಂತಿವೆ. ಹೀಗಾಗಿ ಇಂದು ರಾತ್ರಿಯಾದರೂ ಮಣ್ಣು ತೆರವು ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews