ಮಾಲೂರು ತಾಲೂಕಿನಲ್ಲಿ ಶಿಲ್ಪಕಲೆಯುಳ್ಳ ಐತಿಹಾಸಿಕ ದೇವಾಲಯ ಪತ್ತೆ

Public TV
2 Min Read
KLR TEMPLE copy

ಕೋಲಾರ: ಪ್ರತಿನಿತ್ಯ ನೂರಾರು ಜನರು ಓಡಾಡುವ ರಸ್ತೆಯಲ್ಲಿ ಸುಂದರ ಶಿಲ್ಪಕಲೆಯುಳ್ಳ ಐತಿಹಾಸಿಕ ದೇವಾಲಯವೊಂದು ಅಚಾನಕ್ಕಾಗಿ ಬೆಳಕಿಗೆ ಬಂದಿದೆ.

ಮಾಲೂರು ತಾಲೂಕಿನ ಟೇಕಲ್ ಗ್ರಾಮದಲ್ಲಿ ಈ ದೇವಾಲಯ ಕಂಡು ಬಂದಿದೆ. ಈ ದೇವಾಲಯ ಸುಮಾರು ಸಾವಿರ ವರ್ಷದಷ್ಟು ಹಳೆಯದಾದ ಪುರಾತನವಾಗಿದ್ದು, ಈ ಬೃಹತ್ ಸುಂದರ ಶಿಲ್ಪಕಲೆಯನ್ನು ಹೊಂದಿರುವ ದೇವಾಲಯ ಹಲವು ಕಾರಣಗಳಿಂದ ಕಣ್ಮರೆಯಾಗಿತ್ತು. ದೇವಾಲಯದ ಸುತ್ತ ಗಿಡ ಮರಗಳು ಬೆಳೆದು ದೇವಾಲಯ ಕಣ್ಣಿಗೆ ಕಾಣದಂತಾಗಿತ್ತು. ಜೊತೆಗೆ ನಿಧಿಗಳ್ಳರ ನಿಧಿ ಆಸೆಗೆ ಶಿಥಿಲವಾಗಿ ಹೋಗಿತ್ತು.

KLR 2

ಕಳೆದ ಒಂದು ವಾರದ ಹಿಂದೆ ನಾನು ನಮ್ಮ ಹುಟ್ಟೂರು ಟೇಕಲ್‍ಗೆ ಬಂದಿದ್ದೆ. ಅಲ್ಲಿ ನಮ್ಮ ಜಮೀನು ಬಳಿ ಕೆಲಸ ಮಾಡಿಸುವ ವೇಳೆ ಅಚಾನಕ್ಕಾಗಿ ಈ ದೇವಾಲಯ ಪತ್ತೆಯಾಗಿದೆ. ಕುತೂಹಲ ಹೆಚ್ಚಾಗಿ ನನ್ನ ಖರ್ಚಿನಲ್ಲೇ ದೇವಾಲಯದ ಸುತ್ತ ತುಂಬಿದ್ದ ಮಣ್ಣು, ಗಿಡಗಂಟೆಗಳನ್ನು ಜೆಸಿಬಿ ಸಹಾಯದಿಂದ ತೆಗೆಸಿದ್ದೇನೆ. ಆಗ ಸಾವಿರಾರು ವರ್ಷದಷ್ಟು ಹಳೆಯದಾದ ಸುಂದರ ಶಿಲ್ಪಕಲೆಯುಳ್ಳ ಶಿವನ ದೇವಾಲಯ ಬೆಳಕಿಗೆ ಬಂದಿದೆ. ಈಗ ಸ್ಥಳೀಯರ ನೆರವಿನಿಂದ ದೇವಾಲಯ ಪುನರುಜ್ಜೀವನಗೊಳಿಸುವ ಕಾರ್ಯ ಆರಂಭವಾಗಿದೆ ಎಂದು ಬೆಂಗಳೂರು ಆಡುಗೋಡಿ ಪಾಲಿಕೆ ಸದಸ್ಯ ಮುನಿರಾಜು ಹೇಳಿದ್ದಾರೆ.

klr

ಇಲ್ಲೊಂದು ಪುರಾತನ ದೇವಾಲಯ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ನಾನು ಮತ್ತು ಚಂದ್ರಶೇಖರ್ ದೇವಾಲಯಕ್ಕೆ ಭೇಟಿ ನೀಡಿ ಇಲ್ಲಿನ ಶಿಲ್ಪ ಕಲೆ ಹಾಗೂ ಶಾಸನಗಳನ್ನು ಅಧ್ಯಯನ ಮಾಡಲು ಶುರುಮಾಡಿದ್ದೇವೆ. ಸುಂದರ ಶಿಲ್ಪಕಲೆಗಳನ್ನು ಒಳಗೊಂಡಿರುವ ಹೊಯ್ಸಳರ ಬಲ್ಲಾಳ ದೇವನಿಂದ ನಿರ್ಮಾಣವಾಗಿ ನಂತರ ಚೋಳರು, ವಿಜಯ ನಗರ ಅರಸರಿಂದ ಅಭಿವೃದ್ಧಿ ಹೊಂದಿರಬಹುದು. ಜೊತೆಗೆ ದೇವಾಲಯದ ಗರ್ಭಗುಡಿ ಸಂಪೂರ್ಣ ಮಣ್ಣಿನಲ್ಲಿ ಮುಚ್ಚಿಹೋಗಿದ್ದು, ಅದನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ. ದೇವಾಲಯವನ್ನು ನಿಧಿಗಳ್ಳರು ಕೂಡಾ ಸಾಕಷ್ಟು ಭಗ್ನಗೊಳಿಸಿದ್ದಾರೆ. ಸದ್ಯ ಇಲ್ಲಿರುವ ಶಾಸನಗಳು ಹಾಗೂ ಶಿಲ್ಪಗಳ ಆಧಾರದ ಮೇಲೆ ದೇವಾಲಯದ ಇತಿಹಾಸ ಕುರಿತು ಅಧ್ಯಯನ ಕೂಡ ಆರಂಭವಾಗಿದೆ ಎಂದು ಇತಿಹಾಸಕಾರರಾದ ನರಸಿಂಹನ್ ಅವರು ಹೇಳಿದ್ದಾರೆ.

KLR TEMPKLE

ಬಹಳಷ್ಟು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ನೂರಾರು ಐತಿಹಾಸಿಕ ದೇವಾಲಯಗಳಿವೆ. ಈ ನಡುವೆ ಮತ್ತೊಂದು ಸುಂದರ ಶಿಲ್ಪಕಲೆಯುಳ್ಳ ದೇವಾಲಯ ಬೆಳಕಿಗೆ ಬಂದಿದೆ. ಇದನ್ನು ಪುರಾತತ್ವ ಇಲಾಖೆ ಹಾಗೂ ಮುಜರಾಯಿ ಇಲಾಖೆ ಸಂರಕ್ಷಿಸುವ ಕೆಲಸ ಮಾಡಬೇಕಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *