ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಮುಂದುವರಿದಿದ್ದು, ಒಂದೇ ದಿನ 50 ವೈದ್ಯಾಧಿಕಾರಿಗಳನ್ನು ವರ್ಗಾಯಿಸಿ ಆರೋಗ್ಯ ಇಲಾಖೆ ಆದೇಶ ನೀಡಿದೆ.
ಕಳೆದ ಕೆಲ ದಿನಗಳ ಹಿಂದೆ ಸಿ ಗ್ರೂಪ್, ಸಬ್‍ರಿಜಿಸ್ಟ್ರಾರ್, ಎಂಜಿನಿಯರ್ ಗಳ ವರ್ಗಾವಣೆ ಬಳಿಕ ವೈದ್ಯರನ್ನು ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ. ಆಡಳಿತ ದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.
2018-2019 ನೇ ಸಾಲಿನ ವೈದ್ಯಾಧಿಕಾರಿಗಳ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗಳಲ್ಲಿ ನಿಯಮ ಉಲ್ಲಂಘಿಸಿ ವರ್ಗಾವಣೆ ಮಾಡಲಾಗಿದೆ ಎಂದ ಆರೋಪ ಕೇಳಿಬಂದಿದ್ದು, ವರ್ಗಾವಣೆ ಹಿಂದೆ ಪ್ರಭಾವಿ ರಾಜಕೀಯ ಮುಖಂಡ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಿಜೆಪಿ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ ಚಾಮರಾಜನಗರದ ಸಭೆಯೊಂದರಲ್ಲಿ ಮಾತನಾಡಿ ಸರ್ಕಾರವು ವರ್ಗಾವಣೆ ದಂಧೆ ನಿರತವಾಗಿದೆ. ಭ್ರಷ್ಟಾಚಾರದಲ್ಲಿ ಬಿಟ್ಟು ಬೇರೇನೂ ನಡೆಯುತ್ತಿಲ್ಲ ಎಂದು ಆರೋಪಿಸಿದ್ದರು.
ಸಮ್ಮಿಶ್ರ ಸರ್ಕಾರದ ಆಡಳಿತ ಆರಂಭದಿಂದಲೂ ಸರ್ಕಾರದಲ್ಲಿ ನಡೆಯುವ ವರ್ಗಾವಣೆಗಳು ಸಚಿವರ ನಡುವಿನ ಅಸಮಾಧಾನಕ್ಕೆ ಕಾರಣವಾಗುತ್ತಿದ್ದು, ಕೆಲ ಸಚಿವರು ಈ ಕುರಿತು ಅಸಮಾಧಾನ ಹೊರ ಹಾಕಿದ್ದರು. ಐಎಎಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲೂ ಕಾಂಗ್ರೆಸ್ ಸಚಿವರು, ಶಾಸಕರು ಸಮನ್ವಯ ಸಮಿತಿ ಸಭೆಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews