ಗದಗ: ಆಧುನಿಕ ತಂತ್ರಜ್ಞಾನ ಮುಂದುವರೆದಂತೆಲ್ಲಾ ಇತ್ತೀಚೆಗೆ ದೇಶಿ ಸೊಗಡಿನ ಜನಪದ ಮರೆಮಾಚುತ್ತಿದೆ. ಅದು ಉಳಿಬೇಕು, ಬೆಳೆಯಬೇಕು, ಮುಂದಿನ ಪೀಳಿಗೆಗೂ ನಮ್ಮಯ ದೇಶಿಯಸೊಗಡಿನ ಕೊಡುಗೆ ಇರಬೇಕೆಂದು ಅನಕ್ಷರಸ್ಥ ಜನಪದ ಕಲಾವಿದನೋರ್ವ ಪಣತೊಟ್ಟಿದ್ದಾರೆ.
ಸುಶ್ರಾವ್ಯವಾಗಿ ಹಾಡಿ ಜನರನ್ನ ನಿಬ್ಬೆರಾಗಿಸುತ್ತಿರುವ ಕಲಾವಿದ, ಇವರ ಹಾಡಿಗೆ ಫಿದಾ ಆಗುತ್ತಿರುವ ಜನಸ್ತೋಮ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ನಿವಾಸಿ ನಿಂಗಣ್ಣ. ಓದಿರೋದು ಬರೀ 3ನೇ ಕ್ಲಾಸ್, ಕುರಿ ಕಾಯುತ್ತಾ ಜೀವನ ಕಟ್ಟಿಕೊಂಡಿದ್ದಾರೆ. ಇದರ ಮಧ್ಯೆ ಜಾನಪದ, ಗೀಗಿ ಪದ, ಡೊಳ್ಳಿನ ಪದ, ಭಜನಾಪದ, ರಾಶಿಪದ, ಸೋಬಾನೆ ಪದಗಳನ್ನು ರಚಿಸಿ ರಾಗ ತಾಳದೊಂದಿಗೆ ಸ್ವತಃ ಧ್ವನಿಗೂಡಿಸುತ್ತಾ ಪ್ರಸಿದ್ಧ ಜಾನಪದ ಕಲಾವಿದನಾಗಿದ್ದಾರೆ.
ತನ್ನ ಕಂಠ ಸಿರಿ ಪ್ರತಿಭೆಯಿಂದಲೇ ಅಪಾರ ಜನ ಮನ್ನಣೆ ಪಡೆದಿರೋ ನಿಂಗಪ್ಪ. ತನ್ನ ಹಾಡಿನಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆ, ನಮ್ಮ ಹಿಂದಿನ ಸಂಪ್ರದಾಯ, ರಾಜಕೀಯ ವಿಡಂಬಣೆ, ಜನರ ಸಮಸ್ಯೆ, ಭಯೋತ್ಪಾದನೆ, ರೈತರ ಬವಣೆಯನ್ನು ವಿಭಿನ್ನ ರೀತಿಯಲ್ಲಿ ಹಾಡಿನ ಮೂಲಕ ಜನರ ಕಣ್ಣೆದುರೆ ಕಟ್ಟಿಕೊಡುತ್ತಿದ್ದಾರೆ.
ಜಾನಪದ ಸಾಹಿತ್ಯ ಕಣ್ಮರೆಯಾಗ್ತಿರೋ ಈ ಕಾಲದಲ್ಲಿ ಜಾನಪದ ಸಾಹಿತ್ಯ ರಕ್ಷಣೆಗೆ ಸತತ ಪ್ರಯತ್ನಿಸುತ್ತಿರುವ ಕಲಾವಿದ ನಿಂಗಪ್ಪ. ಸ್ವತಃ 500ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ. ತಾನು ಬರೆದ ಹಾಡು ಈ ಪೀಳಿಗೆಯಲ್ಲಿ ನಶಿಸಬಾರದು, ಮುಂದಿನ ಪೀಳಿಗೆಗೂ ಉಳಿಯುವಂತಾಗಬೇಕೆಂದು ಪುಸ್ತಕ ರೂಪದಲ್ಲಿ ಕೃತಿ ಹೊರತರಲು ಶ್ರಮಿಸುತ್ತಿದ್ದಾರೆ. ಆದರೆ ಆರ್ಥಿಕ ಸ್ಥಿತಿ ಗಂಭೀರ ಇರುವುದರಿಂದ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಮೊರೆ ಬಂದಿದ್ದಾರೆ.
ಕಲಾವಿದ ನಿಂಗಪ್ಪ ಬಡ ಕುರಿಗಾಯಿಯಾಗಿದ್ದು, ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದಾರೆ. ಈ ಮಧ್ಯೆ ಬರೆದ ಪದಗಳನ್ನು ಪುಸ್ತಕ ರೂಪದಲ್ಲಿ ಹೊರತರಲು ಕಷ್ಟಪಡುತ್ತಿದ್ದು. ನಶಿಸುತ್ತಿರುವ ಜಾನಪದ ಸಾಹಿತ್ಯ ಕಲೆಯನ್ನು ಉಳಿಸಲು ಯಾರಾದ್ರೂ ದಾನಿಗಳು ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಕುರಿಗಾಯಿ ನಿಂಗಪ್ಪನ ಪ್ರತಿಭೆ ಮತ್ತು ಕಾಳಜಿಗೆ ಕಲಾಭಿಮಾನಿಗಳು ಸಹಾಯ ಮಾಡಲಿ ಎಂಬುದು ನಮ್ಮ ಆಶಯ.
https://youtu.be/6n1UZ-lF8kU